"ನನ್ನ ದೇಹ ನಿಮ್ಮ ಚರ್ಚೆಯ ವಿಷಯವಲ್ಲ": ಬಾಡಿ ಶೇಮಿಂಗ್ ಮಾಡುವವರಿಗೆ ಖಡಕ್ ಉತ್ತರ ನೀಡಿದ ಕಿಚ್ಚ ಸುದೀಪ್ ಪುತ್ರಿ ಸಾನ್ವಿ - Mahanayaka

“ನನ್ನ ದೇಹ ನಿಮ್ಮ ಚರ್ಚೆಯ ವಿಷಯವಲ್ಲ”: ಬಾಡಿ ಶೇಮಿಂಗ್ ಮಾಡುವವರಿಗೆ ಖಡಕ್ ಉತ್ತರ ನೀಡಿದ ಕಿಚ್ಚ ಸುದೀಪ್ ಪುತ್ರಿ ಸಾನ್ವಿ

kiccha sudeep
29/12/2025

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ಕೇಳಿಬಂದ ಬಾಡಿ ಶೇಮಿಂಗ್ ಮತ್ತು ಅವಹೇಳನಕಾರಿ ಕಾಮೆಂಟ್‌ಗಳಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. “ನನ್ನ ದೇಹ ನಿಮ್ಮ ಚರ್ಚೆಯ ವಿಷಯವಲ್ಲ” ಎಂದು ಹೇಳುವ ಮೂಲಕ ಟ್ರೋಲಿಗರಿಗೆ ಬಿಸಿ ಮುಟ್ಟಿಸಿದ್ದಾರೆ.

ಘಟನೆಯ ಹಿನ್ನೆಲೆ: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ‘ಮಾರ್ಕ್’ ಸಿನಿಮಾ ಕಾರ್ಯಕ್ರಮವೊಂದರಲ್ಲಿ ನಟ ಕಿಚ್ಚ ಸುದೀಪ್ ಅವರು “ನಾವು ಯುದ್ಧಕ್ಕೆ ರೆಡಿ” ಎಂಬ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ಮಗಳ ವಿರುದ್ಧ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೆಟ್ಟ ಕಾಮೆಂಟ್‌ಗಳನ್ನು ಮಾಡಿದ್ದರು. ಮುಖ್ಯವಾಗಿ ಸಾನ್ವಿ ಅವರ ದೈಹಿಕ ತೂಕದ ಬಗ್ಗೆ ಈ ಹಿಂದೆಯೂ ಅನೇಕರು ನೆಗೆಟಿವ್ ಆಗಿ ಮಾತನಾಡಿದ್ದರು.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದಾಗ ಮಾತನಾಡಿದ ಕಿಚ್ಚ ಸುದೀಪ್, “ಇಂತಹ ಕಿತ್ತೋಗಿರೋ ಕಾಮೆಂಟ್‌ಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಇಂತಹವರ ಬಗ್ಗೆ ಮಾತನಾಡಿ ನಮ್ಮ ಸಮಯವನ್ನು ಯಾಕೆ ವ್ಯರ್ಥ ಮಾಡಬೇಕು? ನನ್ನ ಮಗಳು ನನಗಿಂತ ಹತ್ತು ಪಟ್ಟು ಹೆಚ್ಚು ಸ್ಟ್ರಾಂಗ್ ಇದ್ದಾಳೆ. ಅವಳು ನನಗಿಂತ ದೊಡ್ಡದಾಗಿ ಬೆಳೆಯುತ್ತಾಳೆ” ಎಂದು ಮಗಳಿಗೆ ಭರವಸೆಯ ಬೆಂಬಲ ನೀಡಿದ್ದರು.

ಸಾನ್ವಿ ಸುದೀಪ್ ಇನ್‌ ಸ್ಟಾಗ್ರಾಮ್ ಪೋಸ್ಟ್: ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಸಾನ್ವಿ, ಬಾಡಿ ಶೇಮಿಂಗ್ ಮಾಡುವವರ ವಿರುದ್ಧ ಕಿಡಿಕಾರಿದ್ದಾರೆ. ವ್ಯಕ್ತಿಯ ದೈಹಿಕ ಸ್ವರೂಪದ ಬಗ್ಗೆ ಅಥವಾ ತೂಕದ ಬಗ್ಗೆ ಚರ್ಚೆ ಮಾಡುವುದು ತಪ್ಪು ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ.

ಸಾನ್ವಿ ಸುದೀಪ್ ಅವರು ಈಗಾಗಲೇ ‘ಮಾರ್ಕ್’ ಸಿನಿಮಾದಲ್ಲಿ ‘ಮಲೈಕಾ’ ಎಂಬ ಹಾಡನ್ನು ಹಾಡುವ ಮೂಲಕ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಚಿತ್ರರಂಗದ ಗಣ್ಯರು ಅವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ಈ ನಡುವೆ ಟ್ರೋಲಿಗರಿಗೆ ಅವರು ನೀಡಿರುವ ಈ ದಿಟ್ಟ ಉತ್ತರಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ