ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷ ಪಟ್ಟಕ್ಕೆ ಕಂಟಕ: ದಲಿತ ನಾಯಕರಿಗೆ ಮಣೆ ಹಾಕಲಿದೆಯೇ ಬಿಜೆಪಿ? - Mahanayaka

ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷ ಪಟ್ಟಕ್ಕೆ ಕಂಟಕ: ದಲಿತ ನಾಯಕರಿಗೆ ಮಣೆ ಹಾಕಲಿದೆಯೇ ಬಿಜೆಪಿ?

naleen kumar kateel
06/11/2021


Provided by

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಂಟಕ ಬಂದಿದ್ದು, ಅವರನ್ನು ಶೀಘ್ರವೇ ರಾಜ್ಯಾಧ್ಯಕ್ಷ ಪಟ್ಟದಿಂದ ಇಳಿಸುವ ಚಿಂತನೆ ನಡೆಸಲಾಗುತ್ತಿದೆ ಎನ್ನುವ ವಿಚಾರ ಸದ್ಯ ಬಿಜೆಪಿ ಪಾಳಯದೊಳಗೆ ಚರ್ಚೆಯಾಗುತ್ತಿದೆ.

ನಿರೀಕ್ಷಿತ ಮಟ್ಟದಲ್ಲಿ ಪಕ್ಷ ಸಂಘಟನೆಗೆ ವಿಫಲ ಹಾಗೂ ಉಪ ಚುನಾವಣೆಯಲ್ಲಿ ಹಿನ್ನಡೆ, ಕಾರ್ಯಕರ್ತರನ್ನು ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲ ಮೊದಲಾದ ವಿಚಾರಗಳನ್ನು ಮುಂದಿಟ್ಟುಕೊಂಡು ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಲು ಸಿದ್ಧತೆ ನಡೆದಿದೆ ಎಂದು ಹೇಳಲಾಗಿದೆ.

ಸದ್ಯ ಕೇಳಿ ಬರುತ್ತಿರುವ ಮಾತುಗಳ ಪ್ರಕಾರ ನವೆಂಬರ್ 9ರಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದು, ಈ ವೇಳೆ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಖಜಾಂಚಿಗಳು, ಜಿಲ್ಲಾಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕೋರ್ ಕಮಿಟಿ ಮುಖಂಡರ ಜೊತೆಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ನಳಿನ್ ಕುಮಾರ್ ಕಟೀಲ್ ಅವರು ಅಧ್ಯಕ್ಷರಾದ ಬಳಿಕ ಸ್ವತಂತ್ರವಾಗಿ ತೀರ್ಮಾನ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎನ್ನುವ ಚರ್ಚೆಗಳು ಬಿಜೆಪಿಯೊಳಗಿಂದಲೇ ಕೇಳಿ ಬಂದಿದೆ. ಹೀಗಾಗಿ ರಾಜ್ಯದಲ್ಲಿ ಓರ್ವ ಪ್ರಭಾವಿ ದಲಿತ ನಾಯಕನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಕಟ್ಟಲು ಸಿದ್ಧತೆ ನಡೆಸಲಾಗಿದೆ ಎಂಬ ಚರ್ಚೆಗಳು ಕೂಡ ಸದ್ಯ ಕೇಳಿ ಬಂದಿದೆ.

ನಳೀನ್ ಕುಮಾರ್ ಕಟೀಲ್ ಅವರು ಪ್ರತಿಯೊಂದು ವಿಚಾರಕ್ಕೂ ದೆಹಲಿ ನಾಯಯರನ್ನೇ ಅವಲಂಬಿಸುತ್ತಿದ್ದಾರೆ. ಪದಾಧಿಕಾರಿಗಳ ನೇಮಕಾತಿಯಿಂದ ಹಿಡಿದು ಯಾವುದೇ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೂ ಚುನಾವಣಾ ಪ್ರಚಾರ, ಕಾರ್ಯತಂತ್ರ ರೂಪಿಸುವುದರಲ್ಲಿಯೂ ಅವರು ವಿಫಲರಾಗಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.

ಮುಂದಿನ ಚುನಾವಣೆಯಲ್ಲಿ ದಲಿತ ಮುಖ್ಯಮಂತ್ರಿ ಎಂಬ ವಿಚಾರ ರಾಜ್ಯದಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ.  ಹೀಗಾಗಿ ಆರೆಸ್ಸೆಸ್ ಹಿನ್ನೆಲೆಯ ದಲಿತ ನಾಯಕನನ್ನು ಅಧ್ಯಕ್ಷ ಮಾಡುವ ಸಾಧ್ಯತೆಗಳು ಹೆಚ್ಚಾಗಿ ಕಾಣಿಸುತ್ತಿದೆ ಎಂದು ಹೇಳಲಾಗಿದೆ. ಈ ಹೆಸರುಗಳಲ್ಲಿ ಅರವಿಂದ ಲಿಂಬಾವಳಿ ಹೆಸರು ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ ಎನ್ನುವುದು ಇನ್ನೊಂದು ಅಚ್ಚರಿಯ ವಿಚಾರವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ