ತೆಲಂಗಾಣ‌ ಮೇಲೆ ಕೇಸರಿ ಕಣ್ಣು: 4ಜಿ ,3ಜಿ ,2ಜಿ ಗೆ ಹೊಸ ವ್ಯಾಖ್ಯಾನ ಕೊಟ್ಟು ವ್ಯಂಗ್ಯವಾಡಿದ ಅಮಿತ್ ಶಾ - Mahanayaka

ತೆಲಂಗಾಣ‌ ಮೇಲೆ ಕೇಸರಿ ಕಣ್ಣು: 4ಜಿ ,3ಜಿ ,2ಜಿ ಗೆ ಹೊಸ ವ್ಯಾಖ್ಯಾನ ಕೊಟ್ಟು ವ್ಯಂಗ್ಯವಾಡಿದ ಅಮಿತ್ ಶಾ

28/08/2023


Provided by

ಚುನಾವಣಾ ಕಣವಾಗಿರುವ ತೆಲಂಗಾಣದಲ್ಲಿ ಎಲೆಕ್ಷನ್ ಗೆಲ್ಲಲು ಬಿಜೆಪಿ ಈಗಾಗಲೇ ಸಿದ್ದತೆ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ನಡೆದ ರೈತು ಗೋಸಾ- ಬಿಜೆಪಿ ಭರೋಸಾ ಸಮಾವೇಶದಲ್ಲಿ ಕಾಂಗ್ರೆಸ್‌, ಬಿಆರ್‌ಎಸ್‌, ಎಐಎಂಐಎಂ ಪಕ್ಷಗಳ ವಿರುದ್ಧ ಗೃಹ ಸಚಿವ ಅಮಿತ್‌ ಶಾ ಭರ್ಜರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್​ 4 ಜಿ, ಆಡಳಿತಾರೂಢ ಭಾರತ್​ ರಾಷ್ಟ್ರ ಸಮಿತಿ(ಬಿಆರ್​ಎಸ್​) 2 ಜಿ, ಅಸಾದುದ್ದೀನ್​ ಓವೈಸಿಯ ಎಐಎಂಐಎಂ 3ಜಿ ಪಕ್ಷ ಎಂದು ಅಮಿತ್‌ ಶಾ ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷ 4ಜಿ ಪಕ್ಷ ಅಂದರೆ ನಾಲ್ಕು ತಲೆಮಾರಿನ ಪಕ್ಷ, ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಈಗ ರಾಹುಲ್ ಗಾಂಧಿ. ಬಿಆರ್‌ಎಸ್ 2ಜಿ ಪಕ್ಷವಾಗಿದೆ. ಸಿಎಂ ಕೆ ಚಂದ್ರಶೇಖರ್​ ಮತ್ತು ಅವರ ಪುತ್ರ ಕೆಟಿ ರಾಮರಾವ್​ ಪಕ್ಷವಾಗಿದೆ. ಸಂಸದ ಅಸಾದುದ್ದೀನ್​ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) 3 ಜಿ ಪಕ್ಷವಾಗಿದೆ. ಇವರ ಕುಟುಂಬದ ಮೂವರಿಗಾಗಿಯೇ ಪಕ್ಷವನ್ನು ನಡೆಸಲಾಗುತ್ತಿದೆ  ಎಂದು ಟೀಕಿಸಿದರು.

‌ಅಧಿಕಾರಕ್ಕಾಗಿ ಅಸಾದುದ್ದೀನ್ ಓವೈಸಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಇದು ಸೈದ್ಧಾಂತಿಕ ವೈರುದ್ಯ. ಇದ್ಯಾವ ಪಕ್ಷವೂ ಈ ಬಾರಿ ಚುನಾವಣೆಯಲ್ಲಿ ಗೆಲ್ಲುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದರು.

ಅಧಿಕಾರ ಹಿಡಿಯುವ ಸಲುವಾಗಿ ಬಿಜೆಪಿ, ಬಿಆರ್​ಎಸ್​ ಜೊತೆಗೆ ದೋಸ್ತಿ ಮಾಡಿಕೊಂಡಿದೆ ಎಂಬ ಕಾಂಗ್ರೆಸ್ ಆರೋಪ ಸುಳ್ಳು ಎಂದ ಅಮಿತ್ ಶಾ, ಚುನಾವಣೆ ನಂತರ ಬಿಜೆಪಿ ಮತ್ತು ಬಿಆರ್‌ಎಸ್ ಒಂದಾಗುತ್ತವೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ. ಆದರೆ, ಬಿಜೆಪಿ ಯಾವುದೇ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇತ್ತೀಚಿನ ಸುದ್ದಿ