ಮನೇಲಿ ಕೂತ್ಕೊಂಡವರಿಗೆಲ್ಲ ವೆಲ್ ಕಂ ಮಾಡೋಕ್ಕಾಗಲ್ಲ: ಡಿಕೆಶಿ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ

ಮೈಸೂರು: ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದಲ್ಲಿ ಪಕ್ಷದೊಳಗಿನ ಆಂತರಿಕ ಕಲಹದ ಸಾಧನೆಯೂ ಜಗಜ್ಜಾಹೀರಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಜಟಾಪಟಿ ಬಹಿರಂಗಗೊಂಡಿದೆ.
ಸಾಧನಾ ಸಮಾವೇಶದಲ್ಲಿ ಭಾಗವಹಿಸಿದ್ದ ಡಿ.ಕೆ.ಶಿವಕುಮಾರ್ ತಮ್ಮ ಭಾಷಣ ಮುಗಿಸಿ, ಆತುರಾತುರವಾಗಿ ವೇದಿಕೆಯಿಂದ ನಿರ್ಗಮಿಸಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಆರಂಭವಾಗುವ ಸಂದರ್ಭದಲ್ಲಿಯೇ ಸಂಸದ ಸುನೀಲ್ ಬೋಸ್ ಜೊತೆಯಲ್ಲಿ ಡಿಕೆಶಿ ಮಾತನಾಡುತ್ತಾ, ವೇದಿಕೆಯಿಂದ ಇಳಿದು ಹೋಗಿದ್ದರು.
ಆ ನಂತರ ಸಾಧನಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ಪ್ರಸ್ತಾಪ ಮಾಡಲಿಲ್ಲ ಎಂದು ಮುಖಂಡರೊಬ್ಬರು ಬಂದು ಹೇಳಿದ ವೇಳೆ, ಸಿಎಂ ಸಿದ್ದರಾಮಯ್ಯ ಗರಂ ಆದರು.
ಎಲ್ರೀ… ಇಲ್ಲಿ ಇಲ್ವಲ್ಲರೀ…, ಹೊರಟು ಹೋದ್ರು, ಯಾವಾಗಲೂ ಇರೋರ ಹೆಸ್ರು ಹೇಳಬೇಕೇ ಹೊರತು, ಹೊರಟು ಹೋದವರ ಹೆಸರು ಹೇಳಕ್ಕಾಗಲ್ಲ, ವೆಲ್ಕಂ ಮಾಡೋದು, ಇರೋರ್ಗೆ, ಇಲ್ಲಿ ಯಾರ್ಯಾರು ಇದ್ದಾರೆ ಅವರಿಗೆ ಮಾತ್ರವೇ ವೆಲ್ ಕಂ ಮಾಡೋದು, ಮನೇಲಿ ಕೂತ್ಕೊಂಡವರಿಗೆಲ್ಲ ವೆಲ್ ಕಂ ಮಾಡೋಕ್ಕಾಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಗರಂ ಆದರು.
ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅವರು ಪಾಪಾ… ಡಿ.ಕೆ.ಶಿವಕುಮಾರ್ ಹೆಸರು ಹೇಳಿ ಅಂತ ಹೇಳ್ತಾ ಇದ್ದಾರೆ. ಡಿ.ಕೆ.ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಗಳು ಬೆಂಗ್ಳೂರಿಗೆ ಹೋಗ್ತೀನಿ ಅಂತ ಹೇಳಿ ಹೋದ್ರು… ಬೇರೆ ಕೆಲ್ಸ ಇದೆ ಅಂತ ಹೋದ್ರು… ಆದ್ದರಿಂದ ಅವರ ಹೆಸರನ್ನ ಪ್ರಸ್ತಾಪ ಮಾಡಿಲ್ಲ ಎಂದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: