ಕರುಣೆ ಇಲ್ಲದ ಅಧಿಕಾರಿಗಳು!: ರಸ್ತೆ ಇಲ್ಲದ ಕಾರಣ ಅನಾರೋಗ್ಯ ಪೀಡಿತ ವೃದ್ಧನನ್ನು ಜೋಳಿಗೆಯಲ್ಲಿ ಹೊತ್ತೊಯ್ದ ಜನರು!

ಚಿಕ್ಕಮಗಳೂರು: ಕಾಫಿನಾಡ ಕಳಸದಲ್ಲಿ ಇಂದಿಗೂ ಜೋಳಿಗೆ ಜೀವನ ಜೀವಂತವಾಗಿದೆ. ಕರ್ನಾಟಕದ ಸುವರ್ಣ ಸಂಭ್ರಮ ಮಹೋತ್ಸವದ ವೇಳೆ ಮನಕಲಕುವ ಘಟನೆಯೊಂದು ನಡೆದಿದ್ದು, ಜನ ರಸ್ತೆ ಇಲ್ಲದೇ ರೋಗಿಯನ್ನ ಸಾಗಿಸಲು ಪರದಾಡಿದ ಘಟನೆ ಮನಕಲಕುವಂತಿತ್ತು.
ಜನ ರಸ್ತೆ ಇಲ್ಲದೆ ರೋಗಿಗಳನ್ನ ಜೋಳಿಗೆಯಲ್ಲಿ ಹೊತ್ತುಕೊಂಡು ಸಾಗಿಸಿದ ಘಟನೆ ಕಳಸ ತಾಲೂಕಿನ ಹಿನಾರಿ ಗ್ರಾಮದಲ್ಲಿ ನಡೆದಿದೆ. ಯಾರಿಗಾದ್ರು ಅನಾರೋಗ್ಯ ಕಾಣಿಸಿಕೊಂಡರೆ, ಅವರನ್ನು ಜೋಳಿಗೆಯ ಮೂಲಕವೇ ಇಲ್ಲಿಂದು ಎತ್ತುಕೊಂಡು ಹೋಗಬೇಕಾದ ಸ್ಥಿತಿ ಇನ್ನೂ ಜೀವಂತವಾಗಿದೆ.
ರಸ್ತೆ ಇಲ್ಲದ ಕಾರಣ ಖಾಸಗಿ ಜಮೀನಿನಲ್ಲಿ ಹಳ್ಳಿಗರು ಓಡಾಡುವಂತಾಗಿದೆ. ಇದೀಗ ಪಾರ್ಶ್ವವಾಯು ಪೀಡಿತ ವೃದ್ದನನ್ನ ಜೋಳಿಗೆಯಲ್ಲಿ ಹೊತ್ತುಕೊಂಡು ಹಳ್ಳಿಗರು ಆಸ್ಪತ್ರೆಗೆ ತಂದಿದ್ದಾರೆ. ಸುಮಾರು ಒಂದೂವರೆ ಕಿ.ಮೀ.ರಸ್ತೆಗೆ 16 ಕಿ.ಮೀ. ಸುತ್ತಿಕೊಂಡು ಜೋಳಿಗೆಯಲ್ಲಿ ಎತ್ತುಕೊಂಡು ವೃದ್ಧನನ್ನು ಕರೆತಂದಿದ್ದಾರೆ.
ಇರೋ ರಸ್ತೆಗೆ ಆಟೋ ಕೇಳಿದರೆ 1,500-2,000 ಬಾಡಿಗೆ ಕೇಳುತ್ತಾರೆ. ಸರ್ಕಾರ ಸರಿಯಾದ ರಸ್ತೆ ಮಾಡಿಕೊಟ್ಟಿಲ್ಲ, ಹೀಗಾಗಿ ಜನರು ಆಟೋ ಚಾಲಕರಿಗೆ ದಂಡ ಪಾವತಿ ಮಾಡುವಂತಹ ಸ್ಥಿತಿ ಇಲ್ಲಿಯದ್ದಾಗಿದೆ. ಕೈಯಲ್ಲಿ ಹಣವಿಲ್ಲದ ಬಡವರು 1,500-2,000 ಹಣ ಕೊಟ್ಟು ಹೇಗೆ ಪ್ರಮಾಣ ಮಾಡಬೇಕು ಸ್ವಾಮಿ? ಅಂತ ಜನ ಪ್ರಶ್ನೆ ಮಾಡ್ತಾ ಇದ್ದಾರೆ.
ರಸ್ತೆಗಾಗಿ ಮನವಿ ಮಾಡಿದ್ರೆ 3 ವರ್ಷದಿಂದ ಹಣ ಬಂದಿದೆ, ರಸ್ತೆ ಮಾಡ್ತೀವಿ ಅಂತಿದ್ದಾರೆ. ಬಂದ ಹಣ ಎಲ್ಲಿ ಹೋಯ್ತು? ಯಾರ ಖಜಾನೆಗೆ ಸೇರಿದೆ ಅನ್ನೋದು ಗೊತ್ತಿಲ್ಲ. ಆದ್ರೆ ಇಲ್ಲಿನ ಜನರ ಸ್ಥಿತಿಯಂತೂ ಶೋಚನೀಯವಾಗಿದೆ. ಅಧಿಕಾರಿಗಳೇ ನಿಮ್ಮ ಮನೆಯಲ್ಲೂ ಹಿರಿಯ ನಾಗರಿಕರಿಲ್ಲವೇ? ಅವರನ್ನೂ ಹೀಗೆ ಜೋಳಿಗೆಯಲ್ಲಿ ಹೊತ್ತುಕೊಂಡು ಹೋಗಬೇಕಾದ ಸ್ಥಿತಿ ಬಂದ್ರೆ, ನಿಮ್ಮಿಂದ ಸಹಿಸಲು ಸಾಧ್ಯವಾಗುತ್ತಿತ್ತೆ? ನಿಮ್ಮಂತೆಯೇ ಈ ಹಳ್ಳಿಗರು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕಲ್ಲವೇ ಅಂತ ಇಲ್ಲಿನ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ವಿಡಿಯೋ ನೋಡಿ: