ಸರ್ಕಾರಿ ಕಚೇರಿಗಳಲ್ಲಿ ಮೊಬೈಲ್ ಕ್ಯಾಮರಾ ಬ್ಯಾನ್: ಒಂದು ಆದೇಶದಿಂದ ಜನರ ನಂಬಿಕೆ ಕಳೆದುಕೊಂಡ ಬಿಜೆಪಿ ಸರ್ಕಾರ: ಜೆಡಿಎಸ್ ಮುಖಂಡ ಪ್ರವೀಣ್ ಕುಮಾರ್ - Mahanayaka
12:24 AM Thursday 21 - August 2025

ಸರ್ಕಾರಿ ಕಚೇರಿಗಳಲ್ಲಿ ಮೊಬೈಲ್ ಕ್ಯಾಮರಾ ಬ್ಯಾನ್: ಒಂದು ಆದೇಶದಿಂದ ಜನರ ನಂಬಿಕೆ ಕಳೆದುಕೊಂಡ ಬಿಜೆಪಿ ಸರ್ಕಾರ: ಜೆಡಿಎಸ್ ಮುಖಂಡ ಪ್ರವೀಣ್ ಕುಮಾರ್

praveen kumar
16/07/2022


Provided by

ಬೆಂಗಳೂರು:  ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಮೊಬೈಲ್ ಮೂಲಕ ಚಿತ್ರೀಕರಿಸುವಂತಿಲ್ಲ ಎಂಬ ಸರ್ಕಾರದ ಆದೇಶ ಹಾಗೂ ಆದೇಶ ವಾಪಸ್ ಪಡೆದಿರುವ ನಾಟಕೀಯ ಬೆಳವಣಿಗೆಯು ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ನೀಡಿದ್ದು, ರಾಜ್ಯ ಬಿಜೆಪಿ ಸರ್ಕಾರಕ್ಕೆ ಭ್ರಷ್ಟ ಅಧಿಕಾರಿಗಳ ಮೇಲೆ ಯಾಕೆ ಇಷ್ಟೊಂದು ಪ್ರೀತಿ ಎಂದು ಹಾಸನ ಜೆಡಿಎಸ್ ಮುಖಂಡ ಪ್ರವೀಣ್ ಕುಮಾರ್ ಪ್ರಶ್ನಿಸಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಮೊಬೈಲ್ ಮೂಲಕ ಚಿತ್ರೀಕರಿಸುವಂತಿಲ್ಲ ಎಂಬ ಸರ್ಕಾರದ ಆದೇಶ ಹಾಗೂ ರಾತ್ರೋ ರಾತ್ರಿ ಆದೇಶವನ್ನು ಹಿಂಪಡೆದ ಬೆಳವಣಿಗೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,  ಸಾರ್ವಜನಿಕರು ತಮ್ಮ ಕೆಲಸಗಳು ನಡೆಯಬೇಕಾದರೆ, ಪ್ರತಿಭಟನೆ, ಧರಣಿ ಕಂಗಾಲಾದರೂ ಸಾಧ್ಯವಾಗುವುದಿಲ್ಲ. ಆದರೆ, ಸರ್ಕಾರಿ ನೌಕರರು ಒಂದೇ ಒಂದು ಪ್ರತಿಭಟನೆಯೂ ಮಾಡದೇ ಕೇವಲ ಒಂದು ಮನವಿ ಪತ್ರ ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಆತುರಾತುರವಾಗಿ ಆದೇಶ ಹೊರಡಿಸಿದೆ. ಜನರ ವಿರೋಧ ವ್ಯಕ್ತವಾಗುವ ಭೀತಿಯಿಂದ ಇದೀಗ ವಾಪಸ್ ಪಡೆದುಕೊಂಡಿದೆ ಎಂದು ಅವರು ಹೇಳಿದರು.

ಈಗಾಗಲೇ 40% ಕಮಿಷನ್ ನ ಕಳಂಕ ಹೊತ್ತಿರುವ ಬಿಜೆಪಿ ಸರ್ಕಾರ, ಇದೀಗ ಭ್ರಷ್ಟ ಅಧಿಕಾರಿಗಳಿಗೆ  ಸೂಕ್ತ ವಾತಾವರಣ ಸೃಷ್ಟಿ ಮಾಡಲು ಮುಂದಾಗಿದೆಯೇ? ಎನ್ನುವ ಅನುಮಾನಗಳು ಈ ಬೆಳವಣಿಗೆಯಿಂದ ಮೂಡಿವೆ. ಜನ ಸ್ನೇಹಿಯಾಗಬೇಕಾದ ಸರ್ಕಾರ ಭ್ರಷ್ಟ ಅಧಿಕಾರಿಗಳ ಸ್ನೇಹಿಯಾಗುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಿಎಂ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ವೇಳೆ ಸರ್ಕಾರಿ ಕಚೇರಿಗಳು ಪಾರದರ್ಶಕವಾಗಿತ್ತು. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಯಾವಾಗಲೂ ಜನ ಸ್ನೇಹಿಯಾಗಿತ್ತು. ಆದರೆ, ಈಗಿನ ಬಿಜೆಪಿ ಸರ್ಕಾರ ಜನ ಸ್ನೇಹ ಮರೆತು ಭ್ರಷ್ಟ ಅಧಿಕಾರಿಗಳ ಸ್ನೇಹ ಮಾಡುವ ಮೂಲಕ ಜನ ವಿರೋಧಿಯಾಗುತ್ತಿದೆ ಎಂದು ಪ್ರವೀಣ್ ಕುಮಾರ್ ಆರೋಪಿಸಿದರು.

ಯಾವುದೇ ಪ್ರಾಮಾಣಿಕ ಸರ್ಕಾರಿ ನೌಕರನಿಗೆ ಕ್ಯಾಮರಾದ ಭಯ ಇರದು. ಕ್ಯಾಮರಾದ ಭಯ ಇರುವ ಅಧಿಕಾರಿ ಎಂದಿಗೂ ಪ್ರಾಮಾಣಿಕವಾಗಿದ್ದಾನೆ ಎಂದು ಹೇಳಲು ಸಾಧ್ಯವಿಲ್ಲ. ಅಧಿಕಾರಿಗಳ ಉದಾಸೀನತೆ, ಭ್ರಷ್ಟಚಾರ ಮೊದಲಾದವುಗಳು ಸಾರ್ವಜನಿಕರ ಕ್ಯಾಮರಾಗಳಲ್ಲಿ ಸೆರೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಧಿಕಾರಿಗಳ ಬಂಡವಾಳ ಬಯಲಾಗುತ್ತಿದೆ. ಇದರಿಂದ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗುತ್ತಿದೆ. ಹೀಗಾಗಿಯೇ ಸರ್ಕಾರ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ಮುಂದಾಗಿದ್ದು, ಈ ಆದೇಶವನ್ನು ಹೊರಡಿಸಿದೆ. ಇದೀಗ ಜನರ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಾಪಸ್ ಪಡೆದಿದೆ ಎಂದು ಅವರು ಆರೋಪಿಸಿದರು.

ಒಂದೆಡೆ ಧರ್ಮ ಸಂಘರ್ಷ, ಇನ್ನೊಂದೆಡೆ ಸರ್ಕಾರದ ಉನ್ನತ ಹುದ್ದೆಯಾದ ಪಿಎಸ್ ಐ ನೇಮಕಾತಿ ಹಗರಣ, 40% ಕಮಿಷನ್ ಭ್ರಷ್ಟಾಚಾರ ಇವೇ ಮೊದಲಾದ ಚಟುವಟಿಕೆಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಂಡು ಬರುತ್ತಿದೆ. ಇದರಿಂದಾಗಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಪ್ರವೀಣ್ ಕುಮಾರ್ ಆರೋಪಿಸಿದರು.

ರಾಜ್ಯಾದ್ಯಂತ ಭಾರೀ ಮಳೆಯಿಂದಾಗಿ ಜನತೆ ಕಂಗಾಲಾಗಿದ್ದಾರೆ. ಸರ್ಕಾರ ಈ ಬಗ್ಗೆ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಿತ್ತು. ಆದರೆ ಸರ್ಕಾರಕ್ಕೆ ಎಸಿ ರೂಮ್ ನಲ್ಲಿ ಕುಳಿತುಕೊಳ್ಳುವ ಸರ್ಕಾರಿ ಅಧಿಕಾರಿಗಳದ್ದೇ ಚಿಂತೆಯಾಗಿಬಿಟ್ಟಿದೆ. ಜನ ಮಳೆಯಿಂದ ಮನೆ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸರ್ಕಾರ ಇದ್ದಿದ್ದರೆ, ಜನತೆಯ ಕಷ್ಟಕ್ಕೆ ನೆರವಾಗುತ್ತಿತ್ತು. ಆದರೆ ಕಾಲ ಮಿಂಚಿಲ್ಲ, ಜನತೆ ಎಲ್ಲವನ್ನೂ ನೋಡುತ್ತಿದ್ದಾರೆ. ಜಾತಿ, ಧರ್ಮ, ಕೋಮು ಸಂಘರ್ಷಗಳಿಂದ ಬಿಜೆಪಿ ಹೆಚ್ಚು ದಿನ ಅಧಿಕಾರ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್  ಬಹುಮತದೊಂದಿಗೆ ಅಧಿಕಾರ ಪಡೆದು ಜನ ಸ್ನೇಹಿಯಾಗಿ ರಾಜ್ಯದ ಅಭಿವೃದ್ಧಿ ಮಾಡುವ ಕಾಲ ಹೆಚ್ಚು ದೂರವಿಲ್ಲ ಎಂದು ಹಾಸನ ಜೆಡಿಎಸ್ ಮುಖಂಡ  ಪ್ರವೀಣ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ