ಕಾವೇರಿ ವಿಚಾರದಲ್ಲಿ ಮಾತು ಬದಲಾಯಿಸುತ್ತಿರುವ ಊಸರವಳ್ಳಿ ಸರ್ಕಾರ: ಬಸವರಾಜ ಬೊಮ್ಮಾಯಿ ವಾಗ್ದಾಳಿ - Mahanayaka
6:20 AM Wednesday 27 - August 2025

ಕಾವೇರಿ ವಿಚಾರದಲ್ಲಿ ಮಾತು ಬದಲಾಯಿಸುತ್ತಿರುವ ಊಸರವಳ್ಳಿ ಸರ್ಕಾರ: ಬಸವರಾಜ ಬೊಮ್ಮಾಯಿ ವಾಗ್ದಾಳಿ

basavaraj bommai
17/09/2023


Provided by

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಕೊಟ್ಟ ಮಾತು ಬದಲಾಯಿಸುತ್ತಿದ್ದು, ಇದೊಂದು ಊಸರವಳ್ಳಿ ಸರ್ಕಾರ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ‌.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರದ ಮೇಲೆ ತಮಿಳುನಾಡಿನ ಪ್ರಭಾವ ವಿಪರೀತ ಇದ್ದ ಹಾಗೆ ಇದೆ.  ಸುಪ್ರೀಂ ಕೊರ್ಟ್ ಆದೇಶ ಆಗಿಲ್ಲ. ಸಿಡಬ್ಲುಎಂಎ ಸಭೆ ಆಗಿಲ್ಲ ಆದರೂ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುವ ನಿರ್ಧಾರ ಮಾಡಿ ರಾಜ್ಯದ ಜನತೆಗೆ ಧೋಖಾ ಮಾಡಿದೆ. ಇದರ ವಿರುದ್ದ ನಮ್ಮ ಪಕ್ಷದ ವತಿಯಿಂದ ತಿವ್ರವಾದ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.

ಆರಂಭದಲ್ಲಿ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದರು. ಅವರು ಹೇಳಿದ ಮಾರನೇ ದಿನವೇ ಡಿಸಿಎಂ ಡಿ.ಕೆ.ಶಿವಕುಮಾರ್ ನೀರು ಬಿಡುತ್ತಾರೆ.  ಸರ್ಕಾರ ನೀರು ಬಿಡಲು ತೀರ್ಮಾನ ಮಾಡುವುದಾದರೆ ಸರ್ವ ಪಕ್ಷದ ಸಭೆ ಕರೆಯುವ ಅಗತ್ಯ ಏನಿತ್ತು. ಸಿಎಂ ಸರ್ವ ಪಕ್ಷ ದ ಸಭೆ ಕರೆದು ನೀರು ಬಿಡುವುದಿಲ್ಲ ಅಂತ ಹೇಳುತ್ತಾರೆ. ಡಿಸಿಎಂ ನೀರು ಬಿಡುತ್ತಾರೆ. ಇದು ಊಸರವೊಳ್ಳಿ ಸರ್ಕಾರ. ಈ ಸರ್ಕಾರ ರಾಜ್ಯದ ಜನತೆಗೆ ದ್ರೋಹ ಬಗೆದು ತಮಿಳುನಾಡಿಗೆ ನೀರು ಬಿಡುತ್ತಿರುವುದು ಕರಾಳ ನಿರ್ಣಯ  ಎಂದು ವಾಗ್ದಾಳಿ ನಡೆಸಿದರು.

ಧಮ್ ಇದ್ರೆ ನೀರು ಬಿಡದೇ ವಾದ ಮಾಡಲಿ:

ಬಿಜೆಪಿಯವರಿಗೆ ಪ್ರಧಾನಿ ಭೇಟಿ ಮಾಡಿ ಮಾತನಾಡುವ ಧಮ್ ಇಲ್ಲ ಎಂಬ ಡಿಸಿಎಂ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರಕ್ಕೆ ನಿಜವಾದ ತಾಕತ್ತು ದಮ್ಮು ಇದ್ದರೆ ನೀರು ಬಿಡುತ್ತಿರಲಿಲ್ಲ. ನೀರು ಬಿಟ್ಟು ತಾಕತ್ತು ದಮ್ಮಿನ ಬಗ್ಗೆ ಮಾತನಾಡುತ್ತಾರೆ‌. ನಿಮಗೆ ತಾಕತ್ತು ದಮ್ ಇದ್ದರೆ ತಮಿಳುನಾಡಿಗೆ ನೀರು ಬಿಡದೇ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡಿ ರಾಜ್ಯದ ಹಿತ ಕಾಪಾಡಿ ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ವಹಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ರಾಜ್ಯದ ಎಂಪಿಗಳು ಪ್ರಧಾನಿಯನ್ನು ಭೇಟಿ ಮಾಡಿದರೂ ಏನೂ ಪ್ರಯೋಜನ ಇಲ್ಲ. ಇವರಿಗೆ ಓಟ್ ಹಾಕಿದ ಕಾವೇರಿ ಕೊಳ್ಳದ ಮಕ್ಕಳು ಪಶ್ಚಾತಾಪ ಪಡುತ್ತಿದ್ದಾರೆ‌.  ಸುಪ್ರೀಂ ಕೋರ್ಟ್  ಮತ್ತು ತಮಿಳುನಾಡಿನ ಸಿಎಂ ಜೊತೆ ಮಾತುಕತೆ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಇತ್ತೀಚಿನ ಸುದ್ದಿ