ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲೇ 4,000ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಕೊರತೆ: ಸ್ಪೋಟಕ ಮಾಹಿತಿ ಬಹಿರಂಗ

ವಿಮಾನ ಯಾನಿಗಳಿಗೆ ಪ್ರಯಾಣದ ಮೊದಲು ಮತ್ತು ಬಳಿಕ ತಪಾಸಣೆಗಾಗಿಯೇ ಹಲವು ಸಮಯ ಕಳೆಯಬೇಕಾಗಿ ಬರುತ್ತದೆ. ಇದಕ್ಕೆ ಕಾರಣ ಭದ್ರತಾ ಸಿಬ್ಬಂದಿಗಳ ಕೊರತೆ. ದಿಲ್ಲಿ,ಮುಂಬೈ,ಚೆನ್ನೈ ಮತ್ತು ಕೋಲ್ಕತಾ ಸೇರಿದಂತೆ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ 4,000ಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳ ಕೊರತೆಯಿದೆ ಎಂದು ಸರಕಾರದ ಆಂತರಿಕ ಅಧ್ಯಯನವು ತೋರಿಸಿದೆ ಎಂದು livemint.com ವರದಿ ಮಾಡಿದೆ.
ವಾಯುಯಾನ ಸಚಿವಾಲಯವು ನಡೆಸಿರುವ ಅಧ್ಯಯನದ ಪ್ರಕಾರ ದಿಲ್ಲಿ ವಿಮಾನ ನಿಲ್ದಾಣವೊಂದರಲ್ಲೇ 1,300ಕ್ಕೂ ಅಧಿಕ ಸಿಐಎಸ್ಎಫ್ ಸಿಬ್ಬಂದಿಗಳ ಕೊರತೆಯಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 1,000ಕ್ಕೂ ಅಧಿಕ ಹಾಗೂ ಚೆನ್ನೈ ಮತ್ತು ಕೋಲ್ಕತಾ ವಿಮಾನ ನಿಲ್ದಾಣಗಳಲ್ಲಿ ತಲಾ 800ಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳ ಕೊರತೆಯಿದ್ದರೆ ಮುಂಬೈ ವಿಮಾನ ನಿಲ್ದಾಣದಲ್ಲಿ 150ಕ್ಕೂ ಅಧಿಕ ಭದ್ರತಾ ಸಿಬ್ಬಂದಿಗಳ ಕೊರತೆಯಿದೆ.
ಸಿಬ್ಬಂದಿಗಳ ಕೊರತೆ ಭದ್ರತಾ ಕಳವಳಗಳನ್ನು ಹೆಚ್ಚಿಸುವುದು ಮಾತ್ರವಲ್ಲ, ಪ್ರವೇಶ ದ್ವಾರಗಳಲ್ಲಿ ಮತ್ತು ಭದ್ರತಾ ತಪಾಸಣೆಗಾಗಿ ಉದ್ದನೆಯ ಸರದಿ ಸಾಲುಗಳಿಂದಾಗಿ ವಿಳಂಬವಾಗುವ ಮೂಲಕ ಪ್ರಯಾಣಿಕರಿಗೆ ಅನಾನುಕೂಲವನ್ನೂ ಉಂಟು ಮಾಡುತ್ತದೆ.
ಗರಿಷ್ಠ ದಟ್ಟಣೆಯಿರುವ ಬೇಸಿಗೆಯಲ್ಲಿ ಮತ್ತು ಕಳೆದ ವರ್ಷದ ಚಳಿಗಾಲದಲ್ಲಿಯೂ ಭದ್ರತಾ ಕೌಂಟರ್ಗಳಲ್ಲಿ ವಿಳಂಬಗಳ ಕುರಿತು ಪ್ರಯಾಣಿಕರು ದೂರಿಕೊಂಡಿದ್ದು ಇಂತಹ ಅಧ್ಯಯನ ನಡೆಸುವುದನ್ನು ಸರಕಾರಕ್ಕೆ ಅಗತ್ಯವಾಗಿಸಿತ್ತು.
ಒಟ್ಟಾರೆಯಾಗಿ, ಹೆಚ್ಚುತ್ತಿರುವ ವಾಯುಸಂಚಾರಕ್ಕೆ ಅನುಗುಣವಾಗಿ 2024ರ ಅಂತ್ಯದ ವೇಳೆಗೆ 15 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ 5,000ಕ್ಕೂ ಅಧಿಕ ಸಿಐಎಸ್ಎಫ್ ಸಿಬ್ಬಂದಿಯ ಅಗತ್ಯವನ್ನು ಅಧ್ಯಯನವು ಅಂದಾಜಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth