ಅಂಗಾಂಗ ದಾನಿಯಿಂದಾಗಿ ಎರಡೂ ಕೈಗಳನ್ನು ಮರಳಿ ಪಡೆದ ಪೈಂಟರ್!

ದಿಲ್ಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯರ ತಂಡದ ಪರಿಶ್ರಮದಿಂದ 45 ವರ್ಷದ ಚಿತ್ರಗಾರ(ಪೈಂಟರ್) ದಾನಿಯೊಬ್ಬರ ದಯೆಯಿಂದ ಕಳೆದುಕೊಂಡ ಕೈಗಳನ್ನು ಪಡೆದಿದ್ದು ಅವರ ಮೊಗದಲ್ಲಿ ಮತ್ತೆ ಮಂದಹಾಸ ಮೂಡಿಸಿದೆ.
2020ರಲ್ಲಿ ಸಂಭವಿಸಿದ ರೈಲು ದುರಂತದಲ್ಲಿ ಎರಡೂ ಕೈಗಳನ್ನು ಕಳೆದುಕೊಂಡಿದ್ದ ಪೈಂಟರ್ ನ ಬದುಕಿಗೆ ಮೀನಾ ಮೆಹ್ತಾ ಎಂಬ ಮಹಿಳೆ ಬೆಳಕಾಗಿದ್ದಾರೆ. ದಕ್ಷಿಣ ದೆಹಲಿಯ ಪ್ರಸಿದ್ಧ ಶಾಲೆಯ ಆಡಳಿತದ ಮಾಜಿ ಮುಖ್ಯಸ್ಥೆ ಮೀನಾ ಮೆಹ್ತಾ ಅವರ ಬ್ರೈನ್ ಡೆಡ್ ಆದ ಕಾರಣ ಅವರ ಅಂಗಾಂಗಗಳನ್ನು ದಾನ ಮಾಡಲಾಗಿತ್ತು, ಈ ಪೈಕಿ ಪೈಂಟರ್ ಗೆ ಕೈಗಳನ್ನು ದಾನ ಮಾಡಲಾಗಿದ್ದು, ಅವರು ಇದೀಗ ಹಿಂದಿನಂತೆಯೇ ಕೈಗಳನ್ನು ಬಳಸಲು ಶಕ್ತರಾಗಿದ್ದಾರೆ.
ಮೀನಾ ಮೆಹ್ತಾ ಅವರು ಅವರು ತಮ್ಮ ನಿಧನದ ನಂತರ ಅಂಗಗಳನ್ನು ದಾನ ಮಾಡುವುದಾಗಿ ವಾಗ್ದಾನ ಮಾಡಿದ್ದರು. ಆಕೆಯ ಮೂತ್ರಪಿಂಡಗಳು, ಯಕೃತ್ತು ಮತ್ತು ಕಾರ್ನಿಯಾಗಳು ಈಗಾಗಲೇ ಇತರ ಮೂರು ವ್ಯಕ್ತಿಗಳಿಗೆ ಹೊಸ ಜೀವನವನ್ನು ತಂದಿವೆ ಮತ್ತು ಈಗ, ಅವರ ಕೈಗಳು ಕೂಡ ಚಿತ್ರಗಾರನಿಗೆ ಹೊಸ ಚಿತ್ರಗಳನ್ನು ಬಿಡಿಸುವ ಭರವಸೆಯನ್ನು ನೀಡಿವೆ. ಇದು ದಿಲ್ಲಿಯ ಮೊದಲ ಯಶಸ್ವಿ ದ್ವಿ- ಹಸ್ತ ಕಸಿ ಎನಿಸಿಕೊಂಡಿದೆ.
ಅಪಘಾತದಿಂದ ಕೈಗಳನ್ನು ಕಳೆದುಕೊಂಡಿದ್ದ ಪೇಂಟರ್ಗೆ ಮೀನಾ ಅವರ ಎರಡೂ ಕೈಗಳನ್ನು ಅಳವಡಿಸಲಾಗಿದೆ. ಈ ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಪೇಂಟರ್, ಮಾರ್ಚ್ 6ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಂಪೂರ್ಣ ಗುಣಮುಖರಾದ ಬಳಿಕ ಅವರು ಮತ್ತೆ ಬ್ರಷ್ ಹಿಡಿದು ತಮ್ಮ ವೃತ್ತಿಗೆ ಮರಳಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth