ಮೀರತ್ ನಲ್ಲಿ ಪಾಕಿಸ್ತಾನಿ ಐಎಸ್ಐ ಏಜೆಂಟ್ ಬಂಧನ: ಮಾಸ್ಕೋದ ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡ್ತಿದ್ನಂತೆ ಖತರ್ನಾಕ್..!

ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು (ಯುಪಿ ಎಟಿಎಸ್) ಮಾಸ್ಕೋದಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ನಿಯೋಜಿಸಲಾಗಿದ್ದ ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಏಜೆಂಟ್ ನನ್ನು ಬಂಧಿಸಿದೆ.
ಸತ್ಯೇಂದ್ರ ಸಿವಾಲ್ ಅವರನ್ನು 2021 ರಿಂದ ರಾಯಭಾರ ಕಚೇರಿಯಲ್ಲಿ ನೇಮಿಸಲಾಗಿತ್ತು. ಹಾಪುರ್ ಮೂಲದವರಾದ ಅವರು ವಿದೇಶಾಂಗ ಸಚಿವಾಲಯದಲ್ಲಿ ಎಂಟಿಎಸ್ (ಮಲ್ಟಿ-ಟಾಸ್ಕಿಂಗ್, ಸ್ಟಾಫ್) ಆಗಿ ಕೆಲಸ ಮಾಡುತ್ತಿದ್ದರು. ಅಧಿಕೃತ ಹೇಳಿಕೆಯ ಪ್ರಕಾರ, ಭಯೋತ್ಪಾದನಾ ನಿಗ್ರಹ ದಳವು ಮಾಸ್ಕೋದಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೇಹುಗಾರನ ಬಗ್ಗೆ ತನ್ನ ಮೂಲಗಳಿಂದ ಸುಳಿವು ಪಡೆದಿತ್ತು.
ಮಾಹಿತಿಯ ಆಧಾರದ ಮೇಲೆ ಯುಪಿ ಎಟಿಎಸ್ ಸಿವಾಲ್ ಅವರನ್ನು ವಿಚಾರಣೆ ನಡೆಸಿತ್ತು. ಅವರು ಆರಂಭದಲ್ಲಿ ಗೊಂದಲಕಾರಿ ಉತ್ತರಗಳನ್ನು ನೀಡಿದರು. ಆದಾಗ್ಯೂ, ನಂತರ ಅವನು ಬೇಹುಗಾರಿಕೆಯನ್ನು ಒಪ್ಪಿಕೊಂಡಾಗ ಮೀರತ್ ನಲ್ಲಿ ಬಂಧಿಸಲಾಯಿತು.
ವಿಚಾರಣೆಯ ಸಮಯದಲ್ಲಿ ಸತ್ಯೇಂದ್ರ ಸಿವಾಲ್ ಅವರು ಭಾರತೀಯ ಸೇನೆ ಮತ್ತು ಅದರ ದೈನಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಹಣದ ಆಮಿಷ ಒಡ್ಡುತ್ತಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಭಾರತೀಯ ರಾಯಭಾರ ಕಚೇರಿ, ರಕ್ಷಣಾ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಬಗ್ಗೆ ನಿರ್ಣಾಯಕ ಮತ್ತು ಗೌಪ್ಯ ಮಾಹಿತಿಯನ್ನು ಐಎಸ್ಐ ಹ್ಯಾಂಡ್ಲರ್ಗಳಿಗೆ ರವಾನಿಸಿದ ಆರೋಪವೂ ಅವರ ಮೇಲಿದೆ.