ಪಶ್ಚಿಮ ಬಂಗಾಳ ಮೇಲೆ ಪಾಕ್ ನಿಂದ ದಾಳಿ ಬೆದರಿಕೆ ಬಗ್ಗೆ ಯಾಕೆ ಸುಮ್ಮನಿದ್ದೀರಿ?: ಪ್ರಧಾನಿ ಮೋದಿಯನ್ನು ತರಾಟೆಗೆತ್ತಿಕೊಂಡ ಮಮತಾ ಬ್ಯಾನರ್ಜಿ
ಕೋಲ್ಕತ್ತಾ: ಭಾರತದ ಮೇಲೆ ಯಾವುದೇ ದಾಳಿ ನಡೆದರೆ ಕೋಲ್ಕತ್ತಾವನ್ನು ಗುರಿಯಾಗಿಸಿಕೊಳ್ಳುವುದಾಗಿ ಪಾಕಿಸ್ತಾನ ನೀಡಿರುವ ಬೆದರಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿರುವುದನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದ್ದಾರೆ. ಪ್ರಧಾನಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
“ಚುನಾವಣಾ ರ್ಯಾಲಿಗಳಲ್ಲಿ ಬಂಗಾಳವನ್ನು ಗುರಿಯಾಗಿಸಿ ಮಾತನಾಡುವ ಪ್ರಧಾನಿ ಮೋದಿಯವರು, ಪಾಕಿಸ್ತಾನವು ಬಂಗಾಳದ ಮೇಲೆ ದಾಳಿ ಮಾಡುವ ಮಾತನಾಡಿದಾಗ ಯಾಕೆ ಸುಮ್ಮನಿದ್ದಾರೆ?” ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
ದೇಶದ ಭದ್ರತೆಯ ವಿಷಯದಲ್ಲಿ ಪ್ರಧಾನಿಯವರು ಕಠಿಣ ನಿಲುವು ತಳೆಯುತ್ತಿಲ್ಲ ಎಂದು ಆರೋಪಿಸಿದ ಅವರು, “ನಿಮ್ಮಿಂದ ಬಂಗಾಳವನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ನೀವು ರಾಜೀನಾಮೆ ನೀಡಬೇಕು” ಎಂದು ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು, ಭಾರತವು ಯಾವುದೇ ಸಾಹಸಕ್ಕೆ ಕೈಹಾಕಿದರೆ ನಾವು ಕೋಲ್ಕತ್ತಾದ ಮೇಲೆ ದಾಳಿ ನಡೆಸುತ್ತೇವೆ ಎಂದು ಬೆದರಿಕೆ ಹಾಕಿದ್ದರು.
“ದೇಶದ ಮೇಲಿನ ಯಾವುದೇ ಬೆದರಿಕೆಯನ್ನು ನಾವು ಸಹಿಸುವುದಿಲ್ಲ. ಅದೇ ರೀತಿ ಕೋಲ್ಕತ್ತಾ ಅಥವಾ ಬಂಗಾಳದ ಮೇಲೆ ಬೆದರಿಕೆ ಬಂದಾಗ ನಾವು ಸುಮ್ಮನೆ ಕೂರುವುದಿಲ್ಲ” ಎಂದು ಮಮತಾ ಎಚ್ಚರಿಸಿದ್ದಾರೆ.
ನಾದಿಯಾ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಮಮತಾ ಬ್ಯಾನರ್ಜಿ, ಕೂಚ್ ಬೆಹಾರ್ನಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಈ ಬಗ್ಗೆ ಮಾತನಾಡಿಲ್ಲದಿರುವುದನ್ನು ವಿಶೇಷವಾಗಿ ಪ್ರಸ್ತಾಪಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























