ಕ್ಯಾನ್ಸರ್ ನಿಂದ ಗುಣವಾಗಲಿ ಎಂದು ಗಂಗೆಯಲ್ಲಿ ಬಾಲಕನನ್ನು ಮುಳುಗಿಸಿ ಕೊಂದ ಪೋಷಕರು! - Mahanayaka

ಕ್ಯಾನ್ಸರ್ ನಿಂದ ಗುಣವಾಗಲಿ ಎಂದು ಗಂಗೆಯಲ್ಲಿ ಬಾಲಕನನ್ನು ಮುಳುಗಿಸಿ ಕೊಂದ ಪೋಷಕರು!

ganga
25/01/2024


Provided by

ಡೆಹ್ರಾಡೂನ್:  ಪೋಷಕರ ಮೌಢ್ಯತೆಗೆ 5 ವರ್ಷದ ಬಾಲಕನೋರ್ವ ಬಲಿಯಾದ ದಾರುಣ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ.

ಗಂಗಾ ನದಿಯಲ್ಲಿ ಮುಳುಗಿಸಿದರೆ ರೋಗ ಗುಣಮುಖವಾಗುತ್ತದೆ ಎಂಬ ಅಂಧ, ಮೂಢನಂಬಿಕೆಯಿಂದ ಪೋಷಕರು ತಮ್ಮ  5 ವರ್ಷದ ಪುಟ್ಟಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದು ಹಾಕಿದ್ದಾರೆ.

ರಕ್ತದ ಕ್ಯಾನ್ಸರ್  ಕಾಯಿಲೆಯಿಂದ ಬಾಲಕ ಬಳಲುತ್ತಿದ್ದ  ಗಂಗಾನದಿಯ ನೀರು ರೋಗವನ್ನು ಗುಣಪಡಿಸುತ್ತದೆ ಎಂದು ನಂಬಿದ್ದ ಬಾಲಕನ ಪೋಷಕರು, ಮಂಜುಗೆಡ್ಡೆಯಷ್ಟು ತಣ್ಣನೆಯ ನೀರಿನಲ್ಲಿ ಬಾಲಕನನ್ನು ಮುಳುಗಿಸಿದ್ದು, ಚಳಿಯ ತೀವ್ರತೆಗೆ ಬಾಲಕ ಕೊನೆಯುಸಿರೆಳೆದಿದ್ದಾನೆ.

ಉತ್ತರ ಭಾರತದಲ್ಲಿ ಭಾರೀ ಚಳಿಯ ಅಬ್ಬರವಿದ್ದು, ಬಾಲಕನ ಪ್ರಾಣ ಉಳಿಸುವ ಯತ್ನ ಬಾಲಕನ ಕೊಲೆಯಲ್ಲಿ ಅಂತ್ಯವಾಗಿದೆ.  ಮೊದಲೇ ಬಾಲಕನ ಆರೋಗ್ಯ ಹದಗೆಟ್ಟಿತ್ತು. ಈ ನಡುವೆ ಪೋಷಕರು ಬಾಲಕನನ್ನು  ಐಸ್ ನಷ್ಟೇ ತಣ್ಣಗಿನ ನೀರಿನಲ್ಲಿ ಮುಳುಗಿಸಿ ಕೊಂದು ಹಾಕಿದ್ದಾರೆ.

ಬಾಲಕನ ಪಾಲಕರು ಗಂಗಾ ನದಿಯಲ್ಲಿ ಪ್ರಾರ್ಥನೆ ಮಾಡುತ್ತಿರುವಾಗ ಬಾಲಕನ ಚಿಕ್ಕಮ್ಮ ಮಗುವನ್ನು ನೀರಿನಲ್ಲಿ ಮುಳುಗಿಸಿದ್ದಾರೆ. ಬಾಲಕನನ್ನು ನೀರಿನ ಅಡಿಯಲ್ಲಿ ತುಂಬಾ ಹೊತ್ತು ಇರಿಸಿದ್ದನ್ನು ಗಮನಿಸಿ, ಅಲ್ಲಿಯೇ ಇದ್ದ ಕೆಲವರು ಕೂಡಲೇ ಈ ಆಚರಣೆ ನಿಲ್ಲಿಸುವಂತೆ ಕೇಳಿದ್ದಾರೆ. ಆದರೆ, ನೀರಿನಿಂದ ಹೊರ ತೆಗೆಯಲು ಪಾಲಕರು ನಿರಾಕರಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಜಮಾಯಿಸಿದ ಜನರು ಬಲವಂತವಾಗಿ ಬಾಲಕನನ್ನು ಹೊರಗೆ ತೆಗೆದರು.

ಈ ವೇಳೆ ಬಾಲಕನ ಚಿಕ್ಕಮ್ಮ ಕೂಗಾಡಿ ದಾಳಿ ಮಾಡಲು ಯತ್ನಿಸಿದರು. ಆದರೆ, ಬಾಲಕನನ್ನು ಮೇಲೆತ್ತಿ ಆಸ್ಪತ್ರೆಗೆ ಸಾಗಿಸಲಾಯಿತು. ಬಾಲಕನನ್ನು ಪರೀಕ್ಷಿಸಿದ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ಘೋಷಿಸಿದರು. ಇಷ್ಟೆಲ್ಲ ಅದರೂ ಬಾಲಕನ ಚಿಕ್ಕಮ್ಮ ಮೃತದೇಹದ ಪಕ್ಕದಲ್ಲಿ ಕುಳಿತು ಮಗು ಮತ್ತೆ ಬದುಕುವುದು ಖಚಿತ ಎಂದು ಹೇಳುತ್ತಿರುವ ಮೌಢ್ಯತೆಯ ಪರಮಾವಧಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಘಟನೆ ಸಂಬಂಧ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪಾಲಕರು ಮತ್ತು ಬಾಲಕನ ಚಿಕ್ಕಮ್ಮನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ