ಸಾವಿಗೆ ಶರಣಾದ ಮಗಳು: ಕೋಪದಿಂದ ಅಳಿಯನ ಮನೆಗೆ ಬೆಂಕಿಯಿಟ್ಟ ಹೆತ್ತವರು, ಅತ್ತೆ– ಮಾವ ಸಾವು

ಉತ್ತರ ಪ್ರದೇಶ: ಮಗಳು ಸಾವಿಗೆ ಶರಣಾದ ಆಕ್ರೋಶದಲ್ಲಿ ಹೆತ್ತವರು ಅಳಿಯನ ಮನೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದ್ದು, ಘಟನೆಯಲ್ಲಿ ಅತ್ತೆ—ಮಾವ ಸುಟ್ಟು ಕರಕಲಾಗಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಈ ಘಟನೆ ನಡೆದಿದೆ. ಅಂಶಿಕಾ ಕೇಸರವಾಣಿ ಎಂಬಾಕೆ ಕಳೆದ ವರ್ಷವಷ್ಟೇ ವಿವಾಹವಾಗಿದ್ದಳು. ಸೋಮವಾರ ತನ್ನ ಪತಿಯ ಮನೆಯಲ್ಲಿ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಳು.
ಮಗಳ ಸಾವಿನ ಸುದ್ದಿ ಕೇಳಿ ಅಳಿಯನ ಮನೆಗೆ ಬಂದ ಅಂಶಿಕಾ ತಂದೆ ತಾಯಿ ಹಾಗೂ ಕುಟುಂಬಸ್ಥರು, ಅಂಶಿಕಾ ಸಾವಿಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಆಕ್ರೋಶಗೊಂಡಿದ್ದು, ಅಳಿಯನ ಮನೆಯವರ ಬಳಿ ವಾಗ್ವಾದ ನಡೆಸಿದ್ದು, ಜಗಳ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಅಳಿಯನ ಮನೆಗೆ ಬೆಂಕಿ ಹಚ್ಚಿದ್ದಾರೆ.
ಬೆಂಕಿ ಮನೆಯನ್ನು ವ್ಯಾಪಿಸಿದ್ದು, ಮನೆಯೊಳಗೆ ಸಿಲುಕಿದ್ದ ಅತ್ತೆ—ಮಾವ ಬೆಂಕಿಗೆ ಆಹುತಿಯಾಗಿದ್ದಾರೆ. ಅಂಶಿಕಾಳ ಮಾವ ರಾಜೇಂದ್ರ ಕೇಸರವಾಣಿ ಮತ್ತು ಅತ್ತೆ ಶೋಭಾ ದೇವಿ ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ.
ನಾವು ಮನೆಗೆ ತಲುಪಿದಾಗ ಮನೆಯಲ್ಲಿ ಹೊಡೆದಾಟ ನಡೆಯುತ್ತಿತ್ತು. ಸಾವಿಗೆ ಶರಣಾದ ಮಹಿಳೆಯ ಮನೆಯವರು ಅಳಿಯನ ಮನೆಗೆ ಬೆಂಕಿ ಹಚ್ಚಿದ್ದರು. 5 ಜನರನ್ನು ರಕ್ಷಿಸಿ, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದೆವು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದು, ಮನೆಯ ಒಳಗೆ ಎರಡು ಮೃತದೇಹಗಳು ಪತ್ತೆಯಾಗಿದ್ದವು ಎಂದು ಪ್ರಯಾಗ್ ರಾಜ್ ನಗರ ಪೊಲೀಸ್ ಉಪ ಆಯುಕ್ತ ಭುಕರ್ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth