ಕ್ರೈಸ್ತ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಸಂಘಪರಿವಾರ ನಾಯಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಎಸ್ ಡಿಪಿಐ ಒತ್ತಾಯ

ಮಂಗಳೂರು: ಎರಡು ದಿವಸಗಳ ಹಿಂದೆ ಪುತ್ತೂರಿನ ಬೊಳ್ವಾರ್ ನಲ್ಲಿ ಸಂಘಪರಿವಾರ ಸಂಘಟನೆಗಳು ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಕ್ರೈಸ್ತ ಸಮುದಾಯದ ಶಿಕ್ಷಣ ಸಂಸ್ಥೆಗಳ ಮತ್ತು ವೈದ್ಯಕೀಯ ಸಂಸ್ಥೆಗಳ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿದ ಸಂಘಪರಿವಾರ ನಾಯಕ ಹಾಗೂ ವಿವಾದಿತ ವೈದ್ಯ ಎಂಬ ಕುಖ್ಯಾತಿಯ ಎಂ.ಕೆ ಪ್ರಸಾದ್ ಭಂಡಾರಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್ಡಿಪಿಐ ದ.ಕ ಜಿಲ್ಲಾ ಉಪಾಧ್ಯಕ್ಷ ಹಾಗೂ ರೈತ ಮುಖಂಡ ವಿಕ್ಟರ್ ಮಾರ್ಟಿಸ್ ರವರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು, ಕ್ರೈಸ್ತ ಸಮುದಾಯ ದೇಶದಲ್ಲಿ ರಾಜ್ಯದಲ್ಲಿ ಮತ್ತು ನಮ್ಮ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ ಇತಿಹಾಸವುಳ್ಳ ಸಮುದಾಯವಾಗಿದೆ. ಈ ಸಮುದಾಯದ ಶಿಕ್ಷಣ ಸಂಸ್ಥೆಗಳ ಮತ್ತು ಆಸ್ಪತ್ರೆಗಳ ವಿರುದ್ಧ ತನ್ನ ಹರಕು ನಾಲಗೆ ಹರಿಯ ಬಿಡುವ ಸಂಘಪರಿವಾರದ ಮುಖಂಡರು ಮತ್ತು ಅವರ ಮಕ್ಕಳು ಈ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆದವರಾಗಿದ್ದಾರೆ.
ಸ್ವತಃ ಪ್ರಸಾದ್ ಭಂಡಾರಿಯೇ ಕ್ರೈಸ್ತರ ಶಿಕ್ಷಣ ಸಂಸ್ಥೆಯಾದ ಅಲೋಶಿಯಸ್ ಕಾಲೇಜಿನಲ್ಲಿ ಕಲಿತು ಮುಂದಕ್ಕೆ ಡಾಕ್ಟರ್ ಆದವರು. ಈಗ ಉಂಡ ಮನೆಗೆ ದ್ರೋಹ ಬಗೆದವರಂತೆ ಮಾತನಾಡುತ್ತಿರುವುದು ತನ್ನ ಕೀಳು ಸ್ವಭಾವವನ್ನು ಹಾಗೂ ಕೊಳಕು ಮನಸ್ಥಿತಿಯನ್ನು ಬಹಿರಂಗ ಪಡಿಸಿದಂತಾಗಿದೆ ಎಂದು ಅವರು ಹೇಳಿದ್ದಾರೆ.
ಕ್ರೈಸ್ತ ಮಿಷನರಿಗಳು ನಡೆಸುವ ಆಸ್ಪತ್ರೆಗಳಿಗೆ ತುರ್ತು ಚಿಕಿತ್ಸೆಗೆ ಅಥವಾ ಇನ್ನಿತರ ಸಣ್ಣ ಪುಟ್ಟ ಚಿಕಿತ್ಸೆಗೂ ಆಗಮಿಸುವ ಸಂದರ್ಭದಲ್ಲಿ ಯಾರದೇ ಜಾತಿ ಧರ್ಮ ಸಂಘಟನೆ ಪಕ್ಷ ಕೇಳಿ ಚಿಕಿತ್ಸೆಯೂ ನೀಡಿಲ್ಲ ಹಾಗೂ ಶಿಕ್ಷಣವನ್ನು ನೀಡಿಲ್ಲ. ಎಲ್ಲರನ್ನೂ ಸಮಾನ ರೀತಿಯಲ್ಲಿ ಕಂಡು ನಿಷ್ಪಕ್ಷಪಾತವಾಗಿ ಶಿಕ್ಷಣವನ್ನು ಹಾಗೂ ಚಿಕಿತ್ಸೆಯನ್ನು ನೀಡಿ ಸಮಾಜಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದೆ.
ಕ್ರೈಸ್ತ ಸಂಸ್ಥೆಗಳು ಕಾರ್ಯಾಚರಿಸುವ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಪ್ರಸಾದ್ ಭಂಡಾರಿಯ ಅಪ್ಪನ ಸ್ವತ್ತಲ್ಲ,ಬದಲಿಗೆ ಕಾನೂನು ಬದ್ಧವಾಗಿ ನಡೆಸಿಕೊಂಡು ಬರುತ್ತಿರುವ ಸ್ವತ್ತುಗಳಾಗಿದೆ ಎಂದರು.
ಈ ಹಿಂದೆ ಈ ರೀತಿಯ ಹಲವಾರು ಕೋಮು ಪ್ರಚೋದನಕಾರಿ ಭಾಷಣ ಮಾಡಿ ಸಂಘಪರಿವಾರ ನಾಯಕರ ಮನಗೆದ್ದು ತನ್ನ ಹೆಂಡತಿಗೆ ಪುತ್ತೂರಿನ ಬಿಜೆಪಿ ಟಿಕೆಟ್ ಪಡೆಯಲು ಯಶಸ್ವಿಯಾಗಿದ್ದರು.ಇದೀಗ ಚುನಾವಣೆಯ ಸಂದರ್ಭದಲ್ಲಿ ಯಾರಿಗೆ ಟಿಕೆಟ್ ಕೊಡಿಸಲು ಈ ರೀತಿಯ ಕೋಮು ಭಾಷಣ ಎಂದು ಬಹಿರಂಗ ಪಡಿಸಲಿ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಕೋಮು ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕೆಂಬ ಸುಪ್ರೀಂ ಕೋರ್ಟ್ ನ ಆದೇಶ ಇದ್ದರೂ ಪೊಲೀಸ್ ಇಲಾಖೆ ಇವರ ವಿರುದ್ಧ ಪ್ರಕರಣ ದಾಖಲಿಸದೇ ಇರುವುದು ಖಂಡನೀಯ. ಕೂಡಲೇ ಪೋಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಚುನಾವಣಾ ಸಮಯದಲ್ಲಿ ಕೋಮು ಪ್ರಚೋದನಕಾರಿಕಾರಿಯಾಗಿ ಭಾಷಣ ಮಾಡಿದ ಭಾಷಣಕಾರರ ವಿರುದ್ಧ ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ನಾವು ಪೋಲೀಸರ ಈ ರೀತಿಯ ತಾರತಮ್ಯ ಧೋರಣೆಯನ್ನು ಕಾನೂನಾತ್ಮಕವಾಗಿ ನ್ಯಾಯಾಲಯದ ಗಮನಕ್ಕೆ ತರುವ ಕೆಲಸವನ್ನು ಮಾಡಲಿದ್ದೇವೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw