ಸಂಸತ್ ನಲ್ಲಿ ಭದ್ರತಾ ಉಲ್ಲಂಘನೆ ಪ್ರಕರಣ: ದೆಹಲಿ ಪೊಲೀಸರಿಂದ ಯುಎಪಿಎ ಅಡಿಯಲ್ಲಿ ಕೇಸ್ ದಾಖಲು

ಆಘಾತಕಾರಿ ಘಟನೆಯೊಂದರಲ್ಲಿ ಇಬ್ಬರು ಯುವಕರು ಲೋಕಸಭೆಯ ಭದ್ರತೆಯನ್ನು ಉಲ್ಲಂಘಿಸಿ ಸಂದರ್ಶಕರ ಗ್ಯಾಲರಿಯಿಂದ ಸದನವನ್ನು ಪ್ರವೇಶಿಸಿದ ಘಟನೆ ಬುಧವಾರ ಶೂನ್ಯ ವೇಳೆಯಲ್ಲಿ ನಡೆದಿತ್ತು. ಇವರು ಸ್ಮೋಕ್ ಬಾಂಬ್ ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಾ ಸ್ಮೋಕ್ ಬಾಂಬ್ ಸಿಡಿಸಿದ್ದರು. ಕೂಡಲೇ ಇವರನ್ನು ಸಂಸದರು ಹಿಡಿದು ಪೊಲೀಸರ ವಶಕ್ಕೆ ನೀಡಿದರು.
ಸಂಸತ್ ಭಯೋತ್ಪಾದಕ ದಾಳಿಯ 22 ನೇ ವಾರ್ಷಿಕೋತ್ಸವದಂದು ಸದನದಲ್ಲಿ ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಚರ್ಚಿಸುತ್ತಿದ್ದಾಗ ಈ ಘಟನೆ ನಡೆದಿತ್ತಿ. ಬಿಜೆಪಿ ಸಂಸದ ಖಗೆನ್ ಮುರ್ಮು ಮಾತನಾಡುತ್ತಿದ್ದಾಗ ಒಳನುಗ್ಗಿದ ಆಗಂತುಕರು ಸದನಕ್ಕೆ ನುಗ್ಗಿ ಗದ್ದಲ ಸೃಷ್ಟಿಸಿದರು. ತಕ್ಷಣವೇ ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿತ್ತು.
ಈ ಮಧ್ಯೆ ಸಂಸತ್ತಿನ ಆವರಣದ ಹೊರಗೆ, ಮಹಿಳೆ ಸೇರಿದಂತೆ ಇನ್ನೂ ಇಬ್ಬರು ವ್ಯಕ್ತಿಗಳು ಬಣ್ಣದ ಅನಿಲವನ್ನು ಸಿಂಪಡಿಸಿ ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿತ್ತು. ಅವರನ್ನು ಭದ್ರತಾ ಸಿಬ್ಬಂದಿ ಕೂಡ ವಶಕ್ಕೆ ಪಡೆದಿದ್ದಾರೆ.
ದೆಹಲಿ ಪೊಲೀಸ್ ವಿಶೇಷ ಸೆಲ್ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಒಳನುಗ್ಗುವವರ ಉದ್ದೇಶ ಮತ್ತು ಗುರುತನ್ನು ತನಿಖೆ ಮಾಡಿದೆ. ಲೋಕಸಭಾ ಸಚಿವಾಲಯದ ಕೋರಿಕೆಯ ಮೇರೆಗೆ ಗೃಹ ಸಚಿವಾಲಯ (ಎಂಎಚ್ಎ) ಭದ್ರತಾ ಉಲ್ಲಂಘನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.