ಕೊರೊನಾದಿಂದ ಮೃತಪಟ್ಟ ಪತಿಯ ಅಂತ್ಯಕ್ರಿಯೆ ಮುಗಿಸಿ ಬಂದ ಪತ್ನಿ ನೇಣಿಗೆ ಶರಣು
22/05/2021
ಮಂಡ್ಯ: ಕೊರೊನಾ ಸೋಂಕಿನಿಂದ ಮೃತಪಟ್ಟ ಪತಿಯ ಅಂತ್ಯಕ್ರಿಯೆ ನಡೆಸಿ ಬಂದ ಪತ್ನಿ, ಪತಿಯ ಸಾವನ್ನು ಸ್ವೀಕರಿಸಲು ಸಾಧ್ಯವಾಗದೇ ನೇಣಿಗೆ ಕೊರಳೊಡ್ಡಿದ ಘಟನೆ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಬೊಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
11 ತಿಂಗಳ ಹಿಂದೆಯಷ್ಟೇ ಕಿರಣ್ ಮತ್ತು ಪೂಜಾ ಪ್ರೀತಿಸಿ ವಿವಾಹವಾಗಿದ್ದರು. ವಿವಾಹದ ಬಳಿಕ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ವಾಸವಿದ್ದರು. ಕಳೆದ ಮೂರು ನಾಲ್ಕು ದಿನಗಳ ಹಿಂದೆ ತೀವ್ರ ಉಸಿರಾಟದ ತೊಂದರೆಯಿಂದ ಕಿರಣ್ ಬಳಲುತ್ತಿದ್ದು, ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಪತಿಯ ಮೃತದೇಹವನ್ನು ಕಿರಣ್ ಸ್ವಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನಡೆಸಲಾಗಿದ್ದು, ಇತ್ತ ಮನೆಗೆ ಬಂದ ಪತ್ನಿ ಪೂಜಾ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.




























