ಚುನಾವಣಾ ಆಯೋಗದಿಂದ ಆಗಿರುವ ಅನ್ಯಾಯ ಜನರಿಗೆ ಮನದಟ್ಟು ಮಾಡಬೇಕು: ಡಿ.ಕೆ.ಶಿವಕುಮಾರ್ ಕರೆ - Mahanayaka

ಚುನಾವಣಾ ಆಯೋಗದಿಂದ ಆಗಿರುವ ಅನ್ಯಾಯ ಜನರಿಗೆ ಮನದಟ್ಟು ಮಾಡಬೇಕು: ಡಿ.ಕೆ.ಶಿವಕುಮಾರ್ ಕರೆ

d k shivakumar
31/07/2025


Provided by

ಬೆಂಗಳೂರು: ರಾಜ್ಯದ ಚುನಾವಣೆಯಲ್ಲಿ ಆಗಿರುವ ಅಕ್ರಮ, ಚುನಾವಣಾ ಆಯೋಗದಿಂದ ಆಗಿರುವ ಅನ್ಯಾಯವನ್ನು ಜನರಿಗೆ ಮನದಟ್ಟು ಮಾಡಬೇಕು. ನಮ್ಮ ಮತ, ನಮ್ಮ ಹಕ್ಕು ರಕ್ಷಣೆ ಮಾಡಿಕೊಳ್ಳಲು ಸಿದ್ಧರಾಗಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದರು.

ಆಗಸ್ಟ್ 5ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು,  ಭಾರತ್ ಜೋಡೋ ಭವನದಲ್ಲಿ, ಪೂರ್ವಭಾವಿ ಸಭೆಯನ್ನು ನಡೆಸಿದರು.

ಸದ್ಯ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಸುವಾಗ ಮತದಾನ, ಮತಗಟ್ಟೆ, ಮತದಾರರ ಪಟ್ಟಿ ಎಲ್ಲವೂ ಚರ್ಚೆಯಾಗುತ್ತಿದೆ. ನಮ್ಮ ರಾಜ್ಯದಲ್ಲೂ ವಿಧಾನಸಭೆ ಚುನಾವಣೆ ವೇಳೆ ಮತದಾನದ ಅಕ್ರಮದ ಬಗ್ಗೆ ಸಂಶೋಧನೆ ಮಾಡಿದ್ದೆವು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬಿಜೆಪಿಯವರು ಚಿಲುಮೆ ಹಾಗೂ ಇತರೆ ಸಂಸ್ಥೆಗಳ ದುರ್ಬಳಕೆ ಮೂಲಕ ಅಕ್ರಮ ಮಾಡಲು ಮುಂದಾಗಿದ್ದರು. ಅದನ್ನು ನಾವು ಸಂಪೂರ್ಣವಾಗಿ ತಡೆಯಲು ಆಗಲಿಲ್ಲ. ಬಿಜೆಪಿಯವರು ತಮ್ಮ ಕಾರ್ಯಕರ್ತರಿಗೆ ಚುನಾವಣಾ ಆಯೋಗದ ಗುರುತಿನ ಚೀಟಿ ನೀಡಿ ಬೆಂಗಳೂರಿನಲ್ಲಿ ಮತದಾರರ ಪಟ್ಟಿ ಅಕ್ರಮ ಎಸಗಿದ್ದರು. ಇದರಿಂದ ಬೆಂಗಳೂರಿನಲ್ಲಿ ಹೆಚ್ಚು ಕಮ್ಮಿ ಆಗಿತ್ತು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ವಿಧಾನಸಭೆ ಚುನಾವಣೆ ನಂತರ ಮಹದೇವಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾಗೇಶ್ ಅವರ ಪುತ್ರ ನನ್ನನ್ನು ಭೇಟಿ ಮಾಡಿ ನನಗೆ ದೊಡ್ಡ ಮಾಹಿತಿಯನ್ನು ನೀಡಿದ್ದರು. ಅದನ್ನು ನಾವು ಮಾಡಿದೆವು. ಅಷ್ಟು ಹೊತ್ತಿಗೆ ತಡವಾದ ಪರಿಣಾಮ ಅವರಿಗೆ ನ್ಯಾಯ ಒದಗಿಸಲು ಆಗಲಿಲ್ಲ. ನಂತರ ಲೋಕಸಭೆ ಚುನಾವಣೆಯಲ್ಲಿ ಇದೇ ರೀತಿ ನಡೆದಿದ್ದು, ನಮ್ಮ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರು ಪರಿಶೀಲನೆ ಮುಂದುವರಿಸಿದ್ದಾರೆ. ಪಕ್ಷದ ವತಿಯಿಂದ ಇದನ್ನು ಅಧ್ಯಯನ ಮಾಡಿ ದೆಹಲಿಗೆ ತಲುಪಿಸಿದ್ದೇವೆ. ಇಲ್ಲಿ ಆಗಿರುವ ಅಕ್ರಮದ ಬಗ್ಗೆ ನಾನು ಬಿಡಿಸಿ ಹೇಳುವುದಿಲ್ಲ. ಈ ವಿಚಾರ ಯಾರ ಬಾಯಿಂದ ಬರಬೇಕೋ ಅವರಿಂದಲೇ ಬರಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಇದು ಬಿಹಾರ ಅಥವಾ ಕರ್ನಾಟಕದ ಪ್ರಶ್ನೆಯಲ್ಲ. ಮತಗಳ ದುರ್ಬಳಕೆ, ಅಕ್ರಮದ ವಿಚಾರ. ವಿಧಾನಸಭೆ ಚುನಾವಣೆಯಲ್ಲೂ ನಮ್ಮ ಅಭ್ಯರ್ಥಿ ನಾಗೇಶ್ ಅವರು ಅಕ್ರಮದ ಬಗ್ಗೆ ಧ್ವನಿ ಎತ್ತಿದ್ದರು. ಆದರೂ ನಾವು ಬಹುಮತ ಪಡೆದೆವು. ಲೋಕಸಭೆಯಲ್ಲಿ ಅಕ್ರಮ ನಡೆದಿದ್ದು ಕೆಲವು ಕ್ಷೇತ್ರಗಳಲ್ಲಿ ನಾವು ಪರಿಶೀಲನೆ ಮಾಡಿದ್ದೇವೆ. ಅವರು ಏನಾದರೂ ಟೀಕೆ ಮಾಡಿ ನಮ್ಮನ್ನು ನೆನೆಸಿಕೊಳ್ಳಲಿ ಎಂದು ಬಿಜೆಪಿ ನಾಯಕರ ವಿರುದ್ದ, ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ