ಈ ಗ್ರಾಮದಲ್ಲಿ ವಯಸ್ಸಾದವರನ್ನು ಹೊತ್ತುಕೊಂಡೇ ಹೋಗಬೇಕು! | ಕರಗದ ಅಧಿಕಾರಿ, ಜನಪ್ರತಿನಿಧಿಗಳ ಕಲ್ಲು ಹೃದಯ!

ಚಿಕ್ಕಮಗಳೂರು: ನಮ್ಮ ರಾಜ್ಯ ಫ್ರೀ ಯೋಜನೆಗಳಿಗೆ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಪಡೆಯುತ್ತಿದೆ ಆದ್ರೆ… ಇದೇ ಸಂದರ್ಭದಲ್ಲಿ ಇನ್ನೂ ಕೂಡ ಹಲವು ಹಳ್ಳಿಗಳ ದುಸ್ಥಿತಿಗಳು ಹೇಗಿದೆ? ಅಲ್ಲಿನ ಜನರ ದುಸ್ಥಿತಿ ಏನು ಅನ್ನೋದಿಕ್ಕೆ ಈ ಘಟನೆಯೇ ಉದಾಹರಣೆಯಾಗಿದೆ.
ಹೌದು..! ರಸ್ತೆ ಇಲ್ಲದ ಕಾರಣಕ್ಕೆ 70 ವರ್ಷ ವಯಸ್ಸಿನ ಹಿರಿಯ ಮಹಿಳೆಯೊಬ್ಬರನ್ನು ಜೋಳಿಗೆಯಲ್ಲಿ ಹೊತ್ತು ಸಾಗಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ನಡೆದಿದ್ದು, ರಾಜ್ಯ ಸರ್ಕಾರ ಹಾಗೂ ಇಲ್ಲಿನ ಜನ ಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಲೇ ಬೇಕಿದೆ.
ಕಳಸ ತಾಲೂಕಿನ ಕಲ್ಕೋಡು ಗ್ರಾಮದ ದುಸ್ಥಿತಿ ಇದಾಗಿದೆ. 70 ವರ್ಷದ ಶೇಷಮ್ಮ ಎಂಬವರನ್ನು ಕುಟುಂಬಸ್ಥರು ಹಾಗೂ ಸ್ಥಳೀಯರು ಜೋಳಿಗೆಯಲ್ಲಿ ಹೊತ್ತು ಸಾಗಿದ್ದಾರೆ.
ಕಲ್ಕೋಡು ಗ್ರಾಮದಿಂದ ಕಳಸ ತಾಲೂಕಿಗೆ ಬರಬೇಕು ಅಂದ್ರೆ 4 ಕಿ.ಮೀ. ಆಗುತ್ತೆ. ಕುದುರೆಮುಖ ಮೂಲಕ ಸುತ್ತಿಬರಲು 8 ಕಿ.ಮೀ. ಆಗುತ್ತೆ, ಮುಕ್ಕಾಲು ಕಿ.ಮೀ. ಬಂದ್ರೆ ಆಟೋ ಸಿಗುತ್ತೆ. ಆದ್ರೆ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಅಧಿಕಾರಿಗಳು ರಸ್ತೆ ಬಿಡ್ತಿಲ್ಲ. ರಸ್ತೆ ಇಲ್ಲದ ಕಾರಣ 70 ವರ್ಷದ ರೋಗಿಯನ್ನ ಸುಮಾರು 1 ಕಿ.ಮೀ. ಜೋಳಿಗೆಯಲ್ಲಿ ಜನರು ಹೊತ್ತು ತಂದಿದ್ದಾರೆ.
ಮುಕ್ಕಾಲು ಕಿ.ಮೀ. ರಸ್ತೆಗಾಗಿ ಇಲ್ಲಿನ ಜನರು ಸಾಕಷ್ಟು ಬಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ. ಆದ್ರೆ, ದಪ್ಪ ಕಿವಿಯ ಅಧಿಕಾರಿಗಳಿಗೆ ಹಾಗೂ ಜನ ಪ್ರತಿನಿಧಿಗಳಿಗೆ ಇನ್ನೂ ಕೂಡ ಇಲ್ಲಿನ ಜನರ ಸಮಸ್ಯೆಗಳು ಕೇಳುತ್ತಲೇ ಇಲ್ಲ. ಈ ಕಲ್ಕೋಡು ಗ್ರಾಮ 10 ಮನೆಗಳಿವೆ. ಸುಮಾರು 30ರಿಂದ 40 ಜನರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಈ ಕಾಡಂಚಿನ ಕುಗ್ರಾಮವನ್ನು ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆಯೇ ಅಥವಾ ಬಹಿಷ್ಕಾರವೇ ಮಾಡಿದ್ದಾರೆಯೇ ಅನ್ನೋವಂತಹ ಅನುಮಾನ ಸೃಷ್ಟಿಯಾಗುವಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂಬ ಆಕ್ರೋಶದ ಮಾತುಗಳು ಕೇಳಿ ಬಂದಿವೆ.
ಇಲ್ಲಿ ವಯಸ್ಸಾದವರನ್ನು ಹೊತ್ತುಕೊಂಡೇ ಹೋಗಬೇಕು, ಹೊತ್ತುಕೊಂಡೇ ಬರಬೇಕು. ಇಂತಹ ದುಸ್ಥಿತಿಯನ್ನು ನೋಡಿಯೂ ಅಧಿಕಾರಿಗಳು ಸಮಸ್ಯೆ ಬಗೆ ಹರಿಸಲು ಮುಂದಾಗುತ್ತಿಲ್ಲ, ಜನರಿಗೆ ಒಳ್ಳೆಯ ರಸ್ತೆ ಮಾಡಿಕೊಡಲು ಅಧಿಕಾರಿಗಳಿಗೆ ಆಗುವುದಿಲ್ಲವೇ? ಒಂದು ಕಿ.ಮೀ. ರಸ್ತೆ ಮಾಡಿಕೊಡಲು ಸಾಧ್ಯವಾಗದಷ್ಟು ಇಲ್ಲಿನ ಸ್ಥಳೀಯಾಡಳಿತ, ಜನಪ್ರತಿನಿಧಿಗಳು ದುರ್ಬಲರೇ ಅನ್ನೋ ಪ್ರಶ್ನೆಗಳು ಕೇಳಿ ಬಂದಿವೆ.
ವಿಡಿಯೋ ನೋಡಿ:
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw