ಮಹಿಳೆಗೆ ಕಚ್ಚಿದ ಸಾಕು ನಾಯಿ: ಕ್ಷಮೆ ಕೇಳುವ ಬದಲು ಸಂತ್ರಸ್ತ ಮಹಿಳೆಗೇ ಹಲ್ಲೆ ನಡೆಸಿದ ನಾಯಿಯ ಮಾಲಕಿ - Mahanayaka
8:56 PM Thursday 27 - November 2025

ಮಹಿಳೆಗೆ ಕಚ್ಚಿದ ಸಾಕು ನಾಯಿ: ಕ್ಷಮೆ ಕೇಳುವ ಬದಲು ಸಂತ್ರಸ್ತ ಮಹಿಳೆಗೇ ಹಲ್ಲೆ ನಡೆಸಿದ ನಾಯಿಯ ಮಾಲಕಿ

pet dog attacks
27/11/2025

ರಾಜ್‌ ಕೋಟ್‌: ಮಹಿಳೆಯೊಬ್ಬರ ಮೇಲೆ ಸಾಕು ನಾಯಿಯೊಂದು ದಾಳಿ ನಡೆಸಿದ್ದು, ನಾಯಿ ದಾಳಿ ನಡೆಸಿದ್ದಕ್ಕೆ ನಾಯಿಯ ಮಾಲಕಿ ಕ್ಷಮೆಯಾಚಿಸುವ ಬದಲು ಸಂತ್ರಸ್ತ ಮಹಿಳೆಗೆ ಹಲ್ಲೆ ನಡೆಸಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಗುಜರಾತ್‌ ನ ರಾಜ್‌ಕೋಟ್‌ನಿಂದ ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ರಾಜ್‌ ಕೋಟ್‌ ನ ಕೊಥಾರಿಯಾ ಪ್ರದೇಶದ ರೋಲೆಕ್ಸ್ ರಸ್ತೆಯಲ್ಲಿರುವ ಸುರ್ಭಿ ಪಾಸಿಬಲ್ ಫ್ಲಾಟ್‌ಗಳಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಈ ವಿಡಿಯೋವನ್ನು NCMIndia Council For Men Affairs(@NCMIndiaa) ಎಂಬ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವಿಡಿಯೋದಲ್ಲಿ ಕಂಡುಬರುವಂತೆ, ಲಿಫ್ಟ್ ಬಳಿಯಲ್ಲಿ ಮಹಿಳೆಯೊಬ್ಬರು ನಿಂತಿರುತ್ತಾರೆ. ಈ ವೇಳೆ ಕೆಳಗಿನ ಮೆಟ್ಟಿಲುಗಳ ಮೇಲೆ ಒಬ್ಬಾತ ನಾಯಿಯನ್ನು ಹಿಡಿದುಕೊಂಡು ಬರುತ್ತಾನೆ. ಮೇಲೆ ನಾಯಿಯ ಮಾಲಕಿ ಪಾಯಲ್ ಗೋಸ್ವಾಮಿ ಎಂಬಾಕೆ ನಿಂತಿರುತ್ತಾಳೆ. ನಾಯಿಯನ್ನು ಹಿಡಿದುಕೊಂಡು ಬಂದಿದ್ದ ವ್ಯಕ್ತಿ ಮಾಲಕಿಯನ್ನು ಕಂಡು ನಾಯಿಯ ಹಗ್ಗ ಕೈಯಿಂದ ಬಿಟ್ಟು ಬಿಡುತ್ತಾನೆ. ಈ ವೇಳೆ ನಾಯಿ ಏಕಾಏಕಿ ಲಿಫ್ಟ್ ಬಳಿ ನಿಂತಿದ್ದ ಕಿರಣ್ ವಘೇಲಾ ಎಂಬ ಮಹಿಳೆಯ ಕಾಲಿಗೆ ಕಚ್ಚುತ್ತದೆ. ಆದರೆ ನಾಯಿ ಕಚ್ಚಿದೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ. ನಾಯಿ ತನ್ನ ಮೇಲೆ ದಾಳಿ ನಡೆಸಿದ್ದರಿಂದ ಕೋಪಗೊಂಡ ಕಿರಣ್ ವಘೇಲಾ, ನಾಯಿಯ ಮಾಲಕಿಯನ್ನು ಪ್ರಶ್ನಿಸುತ್ತಾಳೆ, ಈ ವೇಳೆ, ಕ್ಷಮೆ ಕೇಳುವ ಬದಲು, ನೊಂದ ಮಹಿಳೆಗೆ ಪಾಯಲ್ ಗೋಸ್ವಾಮಿ ಕಪಾಳಮೋಕ್ಷ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ತನ್ನ ಬೇಜಾವಾಬ್ದಾರಿಯಿಂದ ನಾಯಿ ಕಚ್ಚಿದರೂ ಮಾಲಕಿ ಪಾಯಲ್ ಗೋಸ್ವಾಮಿ ಕಿರಣ್ ವಘೇಲಾ ಅವರಿಗೆ ಹಲ್ಲೆ ನಡೆಸಿದ್ದು ಸರಿಯೇ ಎಂದು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಇದು ನಾಚಿಕೆಗೇಡಿನ ಸಂಗತಿ ಮತ್ತು ಸ್ವೀಕಾರರ್ಹವಾದದ್ದಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಹಲ್ಲೆ ನಡೆಸಿದ ಮಹಿಳೆಯನ್ನ ಬಂಧಿಸಿ ಎಂದು ಒತ್ತಾಯಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ