ನಾನು ವಿದೇಶದಲ್ಲಿದ್ದೆ, ನನ್ನ ಹೃದಯ ನಿಮ್ಮೊಂದಿಗೆ ಇತ್ತು: ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ತಿಳಿಸಿದ ಪ್ರಧಾನಿ ಮೋದಿ

ಚಂದ್ರಯಾನ -3 ಯಶಸ್ಸಿನ ಬಳಿಕ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದ ಮೋದಿ ಅವರು, ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಚಂದ್ರಯಾನ-3 ಯಶಸ್ಸಿನ ಕುರಿತು ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ಪ್ರಧಾನಿ ಮೋದಿಗೆ ಮಾಹಿತಿ ನೀಡಿದರು.
ಇನ್ನೂ ಚಂದ್ರನ ಮೇಲೆ ಕಾಲಿಟ್ಟ ಸಾಧನೆಗೆ ವಿಜ್ಞಾನಿಗಳನ್ನು ಪ್ರಧಾನಿ ಮೋದಿ ಕೊಂಡಾಡಿದರು, ನಿಮ್ಮ ಸಾಧನೆಯನ್ನು ಎಷ್ಟೇ ಕೊಂಡಾಡಿದರೂ ಅದು ಕಡಿಮೆಯೇ. ಚಂದ್ರನ ಮೇಲೆ ಪ್ರಜ್ಞಾನ್ ಪರಾಕ್ರಮ ಕಂಡು ಖುಷಿಯಾಗಿದೆ. ಇಡೀ ವಿಶ್ವವೇ ಭಾರತದ ವಿಜ್ಞಾನ, ತಂತ್ರಜ್ಞಾನವನ್ನು ಒಪ್ಪಿಕೊಂಡಿದೆ ಎಂದರು.
ವಿಶ್ವದ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಭಾರತ ಪರಿಹಾರ ಕಂಡಿದೆ. ನಿಮ್ಮೆಲ್ಲರ ಈ ಸಾಧನೆ ಇತರರಿಗೆ ಸ್ಪೂರ್ತಿದಾಯಕವಾಗಿದೆ. ನೀವೆಲ್ಲರೂ ಸೇರಿ ಭಾರತದ ಕನಸನ್ನು ನನಸು ಮಾಡಿದ್ದೀರಿ. ನಾನು ವಿದೇಶದಲ್ಲಿದ್ದೆ, ಆದರೆ ನನ್ನ ಹೃದಯವು ಎಲ್ಲಾ ಸಮಯದಲ್ಲೂ ಸಂಪೂರ್ಣವಾಗಿ ನಿಮ್ಮೊಂದಿಗೆ ಇತ್ತು ಎಂದರು.
ನಿಮ್ಮನ್ನು ಭೇಟಿಯಾಗಿದ್ದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಇಸ್ರೋ ವಿಜ್ಞಾನಿಗಳ ಸಾಧನೆಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ ಎಂದು ಹೇಳಿದರು.