ಲಾಕ್ ಡೌನ್ ನಡುವೆಯೇ ಪೊಲೀಸರಿಗೆ ಕುಡುಕನ ಟಾರ್ಚರ್!
ಹುಬ್ಬಳ್ಳಿ: ಲಾಕ್ ಡೌನ್ ನಡುವೆಯೇ ಪೊಲೀಸರು ಕುಡುಕನೋರ್ವನಿಂದ ಟಾರ್ಚರ್ ಅನುಭವಿದ ಘಟನೆ ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ. ಲಾಕ್ ಡೌನ್ ಇದ್ದರೂ ಕಂಠಮಟ್ಟ ಕುಡಿದು ಕಿರಿಕ್ ಮಾಡುತ್ತಿದ್ದ ಕುಡುಕನನ್ನು ಪೊಲೀಸರು ಹೇಗೋ ಎತ್ತಿಕೊಂಡು ಬಂದು ಒಂದು ಅಂಗಡಿಯ ಬದಿಯಲ್ಲಿ ಮಲಗಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಇಂದು ಇಡೀ ರಾಜ್ಯದಲ್ಲಿ ಲಾಕ್ ಡೌನ್ ಸ್ಥಿತಿ ನಿರ್ಮಾಣವಾಗಿದೆ. ಇದೇ ಸಂದರ್ಭದಲ್ಲಿ ನಗರದಲ್ಲಿ ಸುತ್ತಾಡುತ್ತಿದ್ದವರನ್ನು ರಾಜ್ಯ ಕೆಲವೆಡೆ ಪೊಲೀಸರು ಅಟ್ಟಾಡಿಸಿ ಹೊಡೆದಿರುವ ಘಟನೆಯೂ ನಡೆದಿದೆ. ಆದರೆ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಕುಡುಕನೊಬ್ಬ ಪೊಲೀಸರಿಗೇ ಟಾರ್ಚರ್ ನೀಡಿದ್ದಾನೆ.
ಈತನನ್ನು ಎತ್ತಿಕೊಂಡು ಬಂದು ಅಂಗಡಿಯೊಂದರ ಮುಂಭಾಗದಲ್ಲಿ ಮಲಗಿಸಿದ ಪೊಲೀಸರು, ನಿನಗೆ ಮದ್ಯ ಎಲ್ಲಿ ಸಿಕ್ಕಿರೋದು ಎಂದು ಎಷ್ಟು ಪ್ರಶ್ನಿಸಿದರೂ ಆತ ಉತ್ತರಿಸಿಲ್ಲ. ಕುಡುಕನಿಗೆ ಎದ್ದು ನಿಂತುಕೊಳ್ಳಲು ಕೂಡ ಶಕ್ತಿ ಇರಲಿಲ್ಲ. ಕೊನೆಗೆ ಪೊಲೀಸರು ಆತನ ನಶೆ ಇಳಿದ ಬಳಿಕ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.




























