ಬ್ಯಾರಿಗಳು ಒಗ್ಗಟ್ಟು ಕಾಪಾಡಿಕೊಳ್ಳಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ಶ್ಲಾಘನೀಯ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಬ್ಯಾರಿ ಸಮುದಾಯವನ್ನು ವಿಭಜಿಸಲು ಯಾರೇ ಎಷ್ಟೇ ಪ್ರಯತ್ನಿಸಿದರೂ, ಸಮುದಾಯದ ಜನರು ತಮ್ಮ ವಿಶಿಷ್ಟ ಅಸ್ಮಿತೆ ಮತ್ತು ಒಗ್ಗಟ್ಟನ್ನು ಎಂದಿಗೂ ಬಿಟ್ಟುಕೊಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬ್ಯಾರಿಸ್ ಸೆಂಟ್ರಲ್ ಕಮಿಟಿ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ “ಬ್ಯಾರಿ ಕೂಟ-2026” ಸಾಂಸ್ಕೃತಿಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕನ್ನಡದ ಮೂಲಕವೇ ಅಸ್ಮಿತೆಯ ರಕ್ಷಣೆ:
ತುಳು ಮತ್ತು ಬ್ಯಾರಿ ಭಾಷೆಗಳಿಗೆ ಸ್ವತಂತ್ರ ಲಿಪಿ ಇಲ್ಲದಿದ್ದರೂ, ಕನ್ನಡ ಭಾಷೆಯ ಮೂಲಕವೇ ತಮ್ಮ ಸಂಸ್ಕೃತಿ ಮತ್ತು ಅನನ್ಯತೆಯನ್ನು ಉಳಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಬ್ಯಾರಿಗಳು ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಗದೆ ದೇಶ–ವಿದೇಶಗಳಲ್ಲಿ ನೆಲೆಸಿದ್ದರೂ ತಮ್ಮ ಮೂಲ ಅಸ್ಮಿತೆಯನ್ನು ಉಳಿಸಿಕೊಂಡಿದ್ದಾರೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ಯಾರಿಗಳು ಮೂಲತಃ ಜಾತ್ಯತೀತರು:
ಬ್ಯಾರಿ ಸಮುದಾಯದ ಬಗ್ಗೆ ಮಾತನಾಡುತ್ತಾ, “ಬ್ಯಾರಿಗಳು ಮೂಲತಃ ವ್ಯಾಪಾರಿಗಳಾಗಿದ್ದು, ಪ್ರಕೃತಿಯಲ್ಲೇ ಜಾತ್ಯತೀತ ಗುಣವನ್ನು ಹೊಂದಿದ್ದಾರೆ. ಅವರಿಗೆ ಜಾತಿ ಅಥವಾ ಧರ್ಮದ ವ್ಯಾಮೋಹವಿಲ್ಲ. ಎಲ್ಲಾ ಸಮುದಾಯಗಳೊಂದಿಗೆ ಬೆರೆತು, ಅವರ ಸಂಸ್ಕೃತಿಯನ್ನು ಗೌರವಿಸುತ್ತಲೇ ತಮ್ಮತನವನ್ನೂ ಉಳಿಸಿಕೊಳ್ಳುವುದು ದೊಡ್ಡ ಸಾಧನೆ” ಎಂದು ಸಿದ್ದರಾಮಯ್ಯ ಹೇಳಿದರು.
ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು
ಸಮುದಾಯದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಇತ್ತೀಚಿನ ಬೆಳವಣಿಗೆಯನ್ನು ಸಿಎಂ ಮುಕ್ತಕಂಠದಿಂದ ಸ್ವಾಗತಿಸಿದರು, ಒಂದು ಕಾಲದಲ್ಲಿ ಮಹಿಳೆಯರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಹೆಣ್ಣು ಮಕ್ಕಳು ವಿದ್ಯಾವಂತರಾಗುತ್ತಿರುವುದು ಲಿಂಗ ತಾರತಮ್ಯ ಹೋಗಲಾಡಿಸಲು ಸಹಕಾರಿ. ಧರ್ಮವನ್ನು ಸ್ವಂತ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸದೆ, ಮನುಷ್ಯತ್ವಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.
ಅನುದಾನ: ಬ್ಯಾರಿ ಭಾಷೆ ಮತ್ತು ಕಲೆಯ ಸಂರಕ್ಷಣೆಗಾಗಿ ಸರ್ಕಾರ ಸದಾ ಸಿದ್ಧವಿದೆ ಎಂದು ಭರವಸೆ ನೀಡಿದ ಸಿಎಂ, ಈಗಾಗಲೇ, ಬ್ಯಾರಿ ಭವನ ನಿರ್ಮಾಣಕ್ಕೆ: ₹5 ಕೋಟಿ, ಮಂಗಳೂರು ಬ್ಯಾರಿ ಅಕಾಡೆಮಿಗೆ: ₹3 ಕೋಟಿ, ಹಜ್ ಭವನಕ್ಕೆ: ₹10 ಕೋಟಿ ನೀಡಿರುವ ಬಗ್ಗೆ ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಸಿಎಂ, ಅವರು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಸಮುದಾಯಕ್ಕೆ ಗೌರವ ತಂದಿದ್ದಾರೆ ಎಂದರು. ಇಡೀ ಬ್ಯಾರಿ ಸಮುದಾಯ ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಇನ್ನಷ್ಟು ಪ್ರಬಲವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಗಣ್ಯರು, ಬ್ಯಾರಿ ಅಕಾಡೆಮಿಯ ಪದಾಧಿಕಾರಿಗಳು ಹಾಗೂ ಸಾವಿರಾರು ಸಮುದಾಯದ ಬಂಧುಗಳು ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD

























