ನಿತಿನ್ ಗಡ್ಕರಿ ಮತ್ತು ಪ್ರಿಯಾಂಕಾ ಗಾಂಧಿ ಭೇಟಿ: ಅಭಿವೃದ್ಧಿ ಚರ್ಚೆ ನಡುವೆ ಹಾಸ್ಯ, ರುಚಿಕರ ಅಕ್ಕಿ ಖಾದ್ಯದ ಸವಿ
ನವದೆಹಲಿ: ಸಂಸತ್ ಭವನದಲ್ಲಿ ಇಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಡುವೆ ಆಸಕ್ತಿದಾಯಕ ಭೇಟಿ ನಡೆಯಿತು. ಕೇರಳದ ರಸ್ತೆ ಯೋಜನೆಗಳ ಬಗ್ಗೆ ಚರ್ಚಿಸಲು ನಡೆದ ಈ ಸಭೆಯು ಕೇವಲ ರಾಜಕೀಯಕ್ಕೆ ಸೀಮಿತವಾಗದೆ, ಹಾಸ್ಯ ಮತ್ತು ಆತ್ಮೀಯತೆಯಿಂದ ಕೂಡಿತ್ತು.
ತಮ್ಮ ಕ್ಷೇತ್ರವಾದ ವಯನಾಡ್ ಸೇರಿದಂತೆ ಕೇರಳದ ಆರು ಪ್ರಮುಖ ರಸ್ತೆ ಯೋಜನೆಗಳ ಬಗ್ಗೆ ಚರ್ಚಿಸಲು ಪ್ರಿಯಾಂಕಾ ಗಾಂಧಿ ಸಚಿವರನ್ನು ಭೇಟಿ ಮಾಡಿದ್ದರು. ಈ ವೇಳೆ ಗಡ್ಕರಿ ಅವರು ಹಾಸ್ಯ ಮಾಡುತ್ತಾ, “ನಿಮ್ಮ ಸಹೋದರ ರಾಹುಲ್ ಗಾಂಧಿ ಅವರ ರಾಯ್ಬರೇಲಿ ಕ್ಷೇತ್ರದ ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ. ಈಗ ನಿಮ್ಮ (ತಂಗಿಯ) ಕೆಲಸ ಮಾಡದಿದ್ದರೆ ನೀವು ದೂರು ನೀಡುತ್ತೀರಿ” ಎಂದು ತಮಾಷೆ ಮಾಡಿದರು. ಇದಕ್ಕೆ ಪ್ರಿಯಾಂಕಾ ಮತ್ತು ಅಲ್ಲಿದ್ದ ಇತರ ನಾಯಕರು ನಗೆಗಡಲಲ್ಲಿ ತೇಲಿದರು.
ಕೇರಳದ ಕೆಲವು ಯೋಜನೆಗಳು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತವೆ ಎಂದು ಗಡ್ಕರಿ ತಿಳಿಸಿದಾಗ, “ಮುಂದಿನ ಬಾರಿ ಕೇರಳದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಈ ಕೆಲಸಗಳನ್ನು ನಾವೇ ಪೂರ್ಣಗೊಳಿಸುತ್ತೇವೆ” ಎಂದು ಪ್ರಿಯಾಂಕಾ ಆತ್ಮವಿಶ್ವಾಸದಿಂದ ಉತ್ತರಿಸಿದರು.
ಈ ಭೇಟಿಯ ವಿಶೇಷವೆಂದರೆ, ನಿತಿನ್ ಗಡ್ಕರಿ ಅವರು ಯೂಟ್ಯೂಬ್ ನೋಡಿ ಸ್ವತಃ ತಯಾರಿಸಿದ್ದ ಅಕ್ಕಿಯ ವಿಶೇಷ ಖಾದ್ಯ (ರೈಸ್ ಬಾಲ್ಸ್ ಮತ್ತು ಚಟ್ನಿ) ಯನ್ನು ಪ್ರಿಯಾಂಕಾ ಗಾಂಧಿ ಅವರಿಗೆ ಸವಿಯಲು ನೀಡಿದರು. ಪ್ರಿಯಾಂಕಾ ಗಾಂಧಿ ಮತ್ತು ದೀಪೇಂದರ್ ಹೂಡಾ ಅವರು ಸಚಿವರ ಆತಿಥ್ಯವನ್ನು ಸ್ವೀಕರಿಸಿ, ಖಾದ್ಯವನ್ನು ಸವಿಯುತ್ತಾ ಯೋಜನೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಈ ನಾಯಕರ ನಡುವಿನ ಸೌಹಾರ್ದಯುತ ಭೇಟಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























