ದಲಿತ ಪರ ಸರ್ಕಾರ ಅಂತಾರೆ, ಜಾತಿ ನಿಂದನೆ ಮಾಡಿದ ಸಚಿವರ ರಕ್ಷಣೆ ಮಾಡ್ತಾರೆ:  ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಚಂದ್ರು ಆಕ್ರೋಶ - Mahanayaka

ದಲಿತ ಪರ ಸರ್ಕಾರ ಅಂತಾರೆ, ಜಾತಿ ನಿಂದನೆ ಮಾಡಿದ ಸಚಿವರ ರಕ್ಷಣೆ ಮಾಡ್ತಾರೆ:  ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಚಂದ್ರು ಆಕ್ರೋಶ

mukhyamanthri chandru
13/09/2023

ಬೆಂಗಳೂರು: ಸಚಿವ ಡಿ.ಸುಧಾಕರ್‌ ಅವರ ಗೂಂಡಾವರ್ತನೆ ಅಕ್ಷಮ್ಯ. ತಕ್ಷಣ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅವರು ಆಗ್ರಹಿಸಿದ್ದಾರೆ.

ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್‌ ಅವರು ತಮ್ಮ ವಿರುದ್ಧ ಭೂಕಬಳಿಕೆ, ಹಲ್ಲೆ ಹಾಗೂ ಜಾತಿ ನಿಂದನೆಯ ದೂರು ದಾಖಲಿಸಿದವರಿಗೆ ಬೆದರಿಕೆ ಹಾಕಿರುವ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮಕ್ಕೆ ಬುಧವಾರ ಪ್ರತಿಕ್ರಿಯಿಸಿದರು.

ಸಚಿವರೊಬ್ಬರು ಭೂಗತ ಪಾತಕಿಗಳ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಯಲಹಂಕ ನನಗೆ ಹೊಸದಲ್ಲ. ಕರ್ನಾಟಕ, ಆಂಧ್ರಪ್ರದೇಶದಲ್ಲಿ ಮಚ್ಚು, ಕೊಡ್ಲಿ ಇಟ್ಟುಕೊಂಡು ಓಡಾಟ ನಡೆಸಿದ್ದೇವೆ ಎಂದಿದ್ದಾರೆ. ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಓಡಾಡಿದ್ದಕ್ಕೆ ಸಂಬಂಧಿಸಿ ತಕ್ಷಣ ಡಿ. ಸುಧಾಕರ್‌ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.

ಸಿಎಂ ಸಿದ್ದರಾಮಯ್ಯ ಅವರು ದಲಿತ ಪರ ಸರ್ಕಾರ ಎಂದು ಹೇಳುತ್ತಲೇ ಬಂದಿದ್ದಾರೆ. ಈಗ ತಮ್ಮ ಸಂಪುಟದ ಸದಸ್ಯರೇ ಜಾತಿ ನಿಂದನೆ ಮಾಡಿ, ದೌರ್ಜನ್ಯ ಎಸಗಿದ್ದಾರೆ. ತಕ್ಷಣ ಅವರನ್ನು ಸಂಪುಟದಿಂದ ವಜಾಗೊಳಿಸುವ ಮೂಲಕ ತಮ್ಮ “ನುಡಿದಂತೆ ನಡೆಯುವ ಸಿದ್ದರಾಮಯ್ಯ” ಎಂಬ ಮಾತನ್ನು ಉಳಿಸಿಕೊಳ್ಳಬೇಕು ಎಂದು ಮು.ಚಂದ್ರು ಒತ್ತಾಯಿಸಿದರು.

ವೈರಲ್‌ ಆಗಿರುವ ವಿಡಿಯೊ 10 ವರ್ಷಗಳ ಹಿಂದಿನ ಪ್ರಕರಣವೆಂದು ಆರೋಪಿ ಡಿ.ಸುಧಾಕರ್‌ ಹೇಳುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಸುಧಾಕರ್‌ ಅವರು ಖರೀದಿಸಿದ್ದ ಖಾಸಗಿ ಜಮೀನಿಗೆ ಬೇರೆಯವರು ನಿರ್ಮಿಸಿದ್ದ ಕಾಂಪೌಂಡ್‌ ತೆರವುಗೊಳಿಸಿ ಜಮೀನು ಸ್ವಾಧೀನಕ್ಕೆ ಪಡೆಯಲು ಮುಂದಾದ ಸಂದರ್ಭ ನಡೆದಿರುವ ಪ್ರಕರಣ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳುತ್ತಿದ್ದಾರೆ. ಇಬ್ಬರ ಹೇಳಿಕೆ ಗೊಂದಲವಾಗಿದೆ. ತನಿಖೆಯ ವಿವರ ಸಿಗುವ ಮೊದಲೇ ಡಿ.ಕೆ.ಶಿವಕುಮಾರ್‌ ಅವರು ಆರೋಪಿಯ ರಕ್ಷಣೆಗೆ ನಿಂತಿರುವುದು ಪ್ರಶ್ನಾರ್ಹ ಎಂದರು.

ಇತ್ತೀಚಿನ ಸುದ್ದಿ