ಮಾನ ಮರ್ಯಾದೆ ತೆಗೀತೇನೆ: ಖ್ಯಾತ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್ ಮಾಡಿದ ಮಹಿಳೆಯ ಬಂಧನ: 'ಆ' ವಿಡಿಯೋಗೆ ತಡೆಯಾಜ್ಞೆ! - Mahanayaka
7:39 PM Thursday 22 - January 2026

ಮಾನ ಮರ್ಯಾದೆ ತೆಗೀತೇನೆ: ಖ್ಯಾತ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್ ಮಾಡಿದ ಮಹಿಳೆಯ ಬಂಧನ: ‘ಆ’ ವಿಡಿಯೋಗೆ ತಡೆಯಾಜ್ಞೆ!

spurthi
22/01/2026

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಮಠದ ಸ್ವಾಮೀಜಿಯೊಬ್ಬರಿಗೆ ಬ್ಲ್ಯಾಕ್‌ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಚಿಕ್ಕಮಗಳೂರು ಮೂಲದ ಮಹಿಳೆಯನ್ನು ಬೆಂಗಳೂರು ಸಿಸಿಬಿ (CCB) ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ: ಬಂಧಿತ ಮಹಿಳೆಯನ್ನು ಸ್ಪೂರ್ತಿ ಎಂದು ಗುರುತಿಸಲಾಗಿದೆ. ಈಕೆ ಐದು ತಿಂಗಳ ಹಿಂದೆ ಸ್ವಾಮೀಜಿಗೆ ಕರೆ ಮಾಡಿ, ತಾನು ತಿಪಟೂರಿನಲ್ಲಿ ವ್ಯಾಸಂಗ ಮಾಡಿದ್ದೇನೆ ಎಂದು ಪರಿಚಯಿಸಿಕೊಂಡಿದ್ದಳು. ತದನಂತರ ಸ್ವಾಮೀಜಿಯವರ ಜೊತೆ ಸಂಪರ್ಕ ಬೆಳೆಸಿ, ಅವರ ಖಾಸಗಿ ವಿಚಾರಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಳು ಎನ್ನಲಾಗಿದೆ.

ಹಣಕ್ಕಾಗಿ ಬೇಡಿಕೆ: ಆರೋಪಿ ಮಹಿಳೆಯು ಈಗಾಗಲೇ ಸ್ವಾಮೀಜಿಯವರಿಂದ ಸುಮಾರು 4.5 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ್ದಳು. ಆದರೆ ಅಷ್ಟಕ್ಕೇ ಸುಮ್ಮನಾಗದೆ, ತನ್ನ ಸಹಚರರೊಂದಿಗೆ ಸೇರಿ ಮತ್ತೆ 1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಳು. ಒಂದು ವೇಳೆ ಹಣ ನೀಡದಿದ್ದರೆ ಸ್ವಾಮೀಜಿಯವರ ಮಾನಹಾನಿ ಮಾಡುವುದಾಗಿ ಮತ್ತು ಪ್ರಾಣ ಬೆದರಿಕೆ ಹಾಕಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಹಿಳೆಯ ಕಾಟ ತಾಳಲಾರದೆ ಸ್ವಾಮೀಜಿಯವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಸ್ಪೂರ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದೇ ಸ್ವಾಮೀಜಿಯವರ ವಿರುದ್ಧ ಎರಡು ವರ್ಷಗಳ ಹಿಂದೆಯೂ ಹನಿಟ್ರ್ಯಾಪ್ ಯತ್ನ ನಡೆದಿತ್ತು. ಅಂದು 6 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದರು. ಈಗ ಮತ್ತೆ ಅಂತಹದ್ದೇ ಪ್ರಕರಣ ಮರುಕಳಿಸಿದೆ.

ಕೋರ್ಟ್‌ನಿಂದ ತಡೆಯಾಜ್ಞೆ: ತಮ್ಮ ವಿರುದ್ಧದ ಯಾವುದೇ ಆಕ್ಷೇಪಾರ್ಹ ಫೋಟೋ ಅಥವಾ ವಿಡಿಯೋಗಳನ್ನು ಮಾಧ್ಯಮಗಳಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡದಂತೆ ಸ್ವಾಮೀಜಿಯವರು ಈಗಾಗಲೇ ನ್ಯಾಯಾಲಯದಿಂದ ತಡೆಯಾಜ್ಞೆ (Injunction Order) ತಂದಿದ್ದಾರೆ. ಸದ್ಯ ಸಿಸಿಬಿ ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ