ದಲಿತ ಯುವಕನಿಗೆ ಮೂತ್ರ ಕುಡಿಸಿದ್ದ ವಿಕೃತ ಪಿಎಸ್ ಐ ಅರ್ಜುನ್ ವಿರುದ್ಧ ಪ್ರಕರಣ ದಾಖಲು
ಚಿಕ್ಕಮಗಳೂರು: ಪುನೀತ್ ಎಂಬ ಅಮಾಯಕ ದಲಿತ ಯುವಕನನ್ನು ಠಾಣೆಯಲ್ಲಿ ಅಕ್ರಮವಾಗಿ ಬಂಧಿಸಿ, ಚಿತ್ರ ಹಿಂಸೆ ನೀಡಿ, ಮೂತ್ರ ಕುಡಿಸಿದ ಹೇಯ ಕೃತ್ಯ ಎಸಗಿದ ಗೋಣಿಬೀಡು ಠಾಣಾಧಿಕಾರಿ ಅರ್ಜುನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಐಪಿಸಿ ಸೆಕ್ಷನ್ 342, 323, 504, 506, 330, 348 ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರಕರಣಗಳಡಿಯಲ್ಲಿ ಆರೋಪಿ ಪಿಎಸ್ ಐ ಅರ್ಜುನ್ ವಿರುದ್ಧ ದೂರು ದಾಖಲಾಗಿದೆ.
ಗೋಣಿಬೀಡು ಠಾಣೆ ವ್ಯಾಪ್ತಿಯ ಕಿರುಗುಂದ ಗ್ರಾಮದ ದಲಿತ ಯುವಕ ಪುನೀತ್ ನನ್ನು, ಆತನಿಗೆ ಸಂಬಂಧವೇ ಇಲ್ಲದ ಪ್ರಕರಣದಲ್ಲಿ ಬಂಧಿಸಿದ ಪಿಎಸ್ ಐ ಅರ್ಜುನ್, ತಲೆಕೆಳಗಾಗಿ ನೇತು ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ತೀವ್ರವಾಗಿ ಜರ್ಝರಿತವಾಗಿದ್ದ ಪುನೀತ್, ಬಾಯಾರಿಕೆಯಿಂದ ನೀರು ಕೇಳಿದ ಸಂದರ್ಭದಲ್ಲಿ ಇತರರೊಂದಿಗೆ ಸೇರಿ, ಕಳ್ಳತನದ ಆರೋಪದಲ್ಲಿ ಬಂಧಿತನಾಗಿದ್ದ ಆರೋಪಿಯೋರ್ವನ ಮೂತ್ರವನ್ನು ಸಂತ್ರಸ್ತ ಯುವಕ ಪುನೀತ್ ಗೆ ಬಲವಂತವಾಗಿ ಕುಡಿಸಿ ವಿಕೃತಿ ಮೆರೆದಿದ್ದಾರೆ.
ಈ ಘಟನೆ ಬೆಳಕಿಗೆ ಬಂದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ಆರೋಪಿ ಅರ್ಜುನ್ ನ ರಕ್ಷಣೆಗಾಗಿ ಆತನನ್ನು ವರ್ಗಾವಣೆ ಮಾಡಲಾಗಿದೆ ಎನ್ನುವ ಆಕ್ರೋಶಗಳೂ ಕೇಳಿ ಬಂದಿದೆ. ತಕ್ಷಣವೇ ಆರೋಪಿಯನ್ನು ಅಮಾನತುಗೊಳಿಸಿ, ಆತನ ವಿರುದ್ಧ ಕಾನೂನು ಕ್ರಮಕೈಗೊಂಡು ಜೈಲಿಗಟ್ಟಬೇಕು ಎಂದು ಸಾರ್ವಜನಿಕರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿದ್ದಾರೆ.




























