ಸತ್ತ ಎಮ್ಮೆಯ ಹಾಲು ಸೇವನೆ; 32ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲು: ರೇಬಿಸ್ ಭೀತಿ - Mahanayaka

ಸತ್ತ ಎಮ್ಮೆಯ ಹಾಲು ಸೇವನೆ; 32ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲು: ರೇಬಿಸ್ ಭೀತಿ

animal
07/03/2026

ಅಹಮದಾಬಾದ್: ಗುಜರಾತ್‌ ನ ಸಬರಕಂಠ ಜಿಲ್ಲೆಯ ಲಾಲೋಡಾ ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಸತ್ತ ಎಮ್ಮೆಯ ಹಾಲು ಸೇವಿಸಿದ 32ಕ್ಕೂ ಹೆಚ್ಚು ಜನರು ಆತಂಕಗೊಂಡು ಆಸ್ಪತ್ರೆಗೆ ಧಾವಿಸಿದ್ದಾರೆ.

ಗ್ರಾಮದ ವಿಶಾಲ್ ಪ್ರಭು ಪಟೇಲ್ ಎಂಬುವವರಿಗೆ ಸೇರಿದ ಎಮ್ಮೆಯು ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಅದು ನಿರಂತರವಾಗಿ ಜೊಲ್ಲು ಸುರಿಸುತ್ತಿತ್ತು ಹಾಗೂ ಆಹಾರ ಮತ್ತು ನೀರು ಸೇವಿಸುವುದನ್ನು ನಿಲ್ಲಿಸಿತ್ತು. ಮಾರ್ಚ್ 5 ರಂದು ಆ ಎಮ್ಮೆ ಸಾವನ್ನಪ್ಪಿದೆ. ಪಶುವೈದ್ಯರ ತಪಾಸಣೆ ವೇಳೆ ಎಮ್ಮೆಗೆ ‘ಬೋವಿನ್ ರೇಬಿಸ್’ (ಜಾನುವಾರುಗಳಲ್ಲಿ ಕಂಡುಬರುವ ಹುಚ್ಚುನಾಯಿ ಕಾಯಿಲೆ) ಇರಬಹುದು ಎಂದು ಶಂಕಿಸಲಾಗಿತ್ತು.

ಎಮ್ಮೆ ಸಾಯುವ ಮೊದಲು ಅದರ ಹಾಲನ್ನು ಗ್ರಾಮದ ಸುಮಾರು 20 ರಿಂದ 30 ಜನರು ಸೇವಿಸಿದ್ದರು. ಎಮ್ಮೆ ರೇಬಿಸ್‌ ನಿಂದ ಸತ್ತಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಜನರು ಗಾಬರಿಗೊಂಡಿದ್ದಾರೆ. ತಮಗೂ ರೋಗ ಹರಡಬಹುದು ಎಂಬ ಭೀತಿಯಿಂದ 32 ಜನರು ಇದಾರ್‌ ನ ಉಪ–ಜಿಲ್ಲಾ ಆಸ್ಪತ್ರೆಗೆ ತೆರಳಿ ‘ಆಂಟಿ–ರೇಬಿಸ್’ (ARV) ಲಸಿಕೆ ಪಡೆದಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಜನಕ್ ಬಿ. ಪಟೇಲ್, “ಸೋಂಕಿತ ಪ್ರಾಣಿಯ ಹಾಲು ಸೇವಿಸುವುದರಿಂದ ರೇಬಿಸ್ ಹರಡುವುದಿಲ್ಲ. ಇದು ಕೇವಲ ಒಂದು ಮಿಥ್ಯೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಜನರ ಆತಂಕ ದೂರ ಮಾಡಲು ಅವರಿಗೆ ಲಸಿಕೆ ನೀಡಲಾಗಿದೆ” ಎಂದು ತಿಳಿಸಿದ್ದಾರೆ.

ಎಮ್ಮೆಗೆ ನಾಯಿ ಕಡಿದ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೂ, ರೇಬಿಸ್ ವೈರಸ್‌ ನ ಲಕ್ಷಣಗಳು ಕಾಣಿಸಿಕೊಳ್ಳಲು 2 ರಿಂದ 6 ತಿಂಗಳು ಬೇಕಾಗಬಹುದು. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದ ಇತರ ಪ್ರಾಣಿಗಳಿಗೂ ಲಸಿಕೆ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ