ಭಾರೀ ಗಾಳಿಗೆ ಮಗುಚಿ ಬಿದ್ದ ತೆಪ್ಪ: ಓರ್ವ ಸಾವು, ಇಬ್ಬರು ಪಾರು
ಮೀನು ಹಿಡಿಯಲು ಹೋದಾಗ ಭಾರೀ ಗಾಳಿಗೆ ತೆಪ್ಪ ಮಗುಚಿ ಬಿದ್ದು ಓರ್ವ ಸಾವನ್ನಪ್ಪಿ, ಇಬ್ಬರು ಪಾರಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದ ಭದ್ರಾ ಜಲಾಶಯದಲ್ಲಿ ನಡೆದಿದೆ.
ಮೃತನನ್ನ 40 ವರ್ಷದ ಕೃಷ್ಣ ಎಂದು ಗುರುತಿಸಲಾಗಿದೆ. ಭದ್ರಾ ಜಲಾಶಯದಲ್ಲಿ ಕೃಷ್ಣ,ಅಜಯ್ ಹಾಗೂ ರಾಜೇಶ್ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ಬೀಸಿದ ಭಾರೀ ಗಾಳಿಯಿಂದ ಉಕ್ಕಡ ಮಗುಚಿ ಬಿದ್ದಿದೆ. ಉಕ್ಕಡ ಮಗುಚಿ ಬೀಳುತ್ತಿದ್ದಂತೆ ಅಜಯ್ ಹಾಗೂ ರಾಜೇಶ್ ಈಜಿ ದಡ ಸೇರಿದ್ದಾರೆ. ಆದರೆ, ಕೃಷ್ಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ನೀರಿನಲ್ಲಿ ಮುಳುಗುತ್ತಿದ್ದ ಕೃಷ್ಣನನ್ನ ಬದುಕಿಸಲು ರಾಜೇಶ್ ಹಾಗೂ ಅಜಯ್ ಹೋರಾಡಿದ್ದಾರೆ. ಆದರೆ, ಭಾರೀ ಗಾಳಿ, ಗಾಳಿಗೆ ನೀರಿನ ಅಲೆಗಳು ರಭಸವಾಗಿದ್ದ ಕಾರಣ ಕೃಷ್ಣನನ್ನ ಬದುಕಿಸಲು ಸಾಧ್ಯವಾಗಿಲ್ಲ.
ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಕೃಷ್ಣ ಅವರ ಮೃತದೇಹವನ್ನ ಉಡುಪಿಯ ಮಲ್ಪೆ ಮೂಲದ ಈಜು ತಜ್ಞ ಈಶ್ವರ್ ಮಲ್ಪೆ ಹಾಗೂ ತಂಡದವರು ಹುಡುಕಿ ಹೊರ ತಂದಿದ್ದಾರೆ. ಮೃತ ಕೃಷ್ಣ ಮೂಲತಃ ತರೀಕೆರೆ ತಾಲೂಕಿನವನು. ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




























