ರಾಜ್ಯಸಭಾ ಚುನಾವಣೆ: ಸೋನಿಯಾ, ನಡ್ಡಾ ಸೇರಿ 41 ಮಂದಿ ಅವಿರೋಧ ಆಯ್ಕೆ; ಫೆ.27ರಂದು 15 ಸ್ಥಾನಗಳಿಗೆ ಮತದಾನ

ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಎಲ್.ಮುರುಗನ್ ಮತ್ತು ಬಿಜೆಪಿಯ ಅಶೋಕ್ ಚವಾಣ್ ಸೇರಿದಂತೆ 41 ಅಭ್ಯರ್ಥಿಗಳು ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಯಾವುದೇ ವಿರೋಧವಿಲ್ಲದೆ ಆಯ್ಕೆಯಾದರು. ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ಉತ್ತರ ಪ್ರದೇಶದ ಉಳಿದ 15 ಸ್ಥಾನಗಳಿಗೆ ಫೆಬ್ರವರಿ 27 ರಂದು ಮತದಾನ ನಡೆಯಲಿದೆ.
ಬಿಜೆಪಿ 20, ಕಾಂಗ್ರೆಸ್ 6, ತೃಣಮೂಲ ಕಾಂಗ್ರೆಸ್ 4, ವೈಎಸ್ಆರ್ ಕಾಂಗ್ರೆಸ್ 3, ಆರ್ ಜೆಡಿ 2, ಬಿಜೆಡಿ 2, ಎನ್ ಸಿಪಿ, ಶಿವಸೇನೆ, ಬಿಆರ್ ಎಸ್ ಮತ್ತು ಜೆಡಿಯು ತಲಾ 1 ಸ್ಥಾನಗಳನ್ನು ಗೆದ್ದಿವೆ. ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕದಂದು ಚುನಾವಣಾಧಿಕಾರಿಗಳು ಈ 41 ಅಭ್ಯರ್ಥಿಗಳನ್ನು ವಿಜೇತರೆಂದು ಘೋಷಿಸಿದರು. ಯಾಕೆಂದರೆ ಈ ಸ್ಥಾನಗಳಿಗೆ ಬೇರೆ ಯಾವುದೇ ಸ್ಪರ್ಧಿಗಳು ಇರಲಿಲ್ಲ.
ಫೆಬ್ರವರಿ 27 ರಂದು 56 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಿಗದಿಯಾಗಿತ್ತು. ಈ ಪೈಕಿ 50 ಸದಸ್ಯರು ಏಪ್ರಿಲ್ 2 ರಂದು ಮತ್ತು ಆರು ಸದಸ್ಯರು ಏಪ್ರಿಲ್ 3 ರಂದು ನಿವೃತ್ತರಾಗಲಿದ್ದಾರೆ. ಉತ್ತರ ಪ್ರದೇಶದ 10, ಕರ್ನಾಟಕದ 4 ಮತ್ತು ಹಿಮಾಚಲ ಪ್ರದೇಶದ 1 ಸ್ಥಾನಗಳಿಗೆ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5 ರಿಂದ ಮತ ಎಣಿಕೆ ಪ್ರಾರಂಭವಾಗಲಿದೆ.
ನಡ್ಡಾ ಮತ್ತು ಅವರ ಪಕ್ಷದ ಸಹೋದ್ಯೋಗಿಗಳಾದ ಜಸ್ವಂತ್ ಸಿಂಗ್ ಪರ್ಮಾರ್, ಮಯಾಂಕ್ ನಾಯಕ್ ಮತ್ತು ವಜ್ರದ ಉದ್ಯಮಿ ಗೋವಿಂದಭಾಯ್ ಧೋಲಾಕಿಯಾ ಗುಜರಾತ್ ನಿಂದ ಗೆದ್ದಿದ್ದಾರೆ. 182 ಸದಸ್ಯರ ಗುಜರಾತ್ ವಿಧಾನಸಭೆಯಲ್ಲಿ 156 ಶಾಸಕರನ್ನು ಹೊಂದಿರುವ ಬಿಜೆಪಿ ವಿರುದ್ಧ ಕೇವಲ 15 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ.
ರಾಜಸ್ಥಾನದಿಂದ ಗೆದ್ದ ಮೂವರು ಅಭ್ಯರ್ಥಿಗಳಲ್ಲಿ ಸೋನಿಯಾ ಗಾಂಧಿ, ಬಿಜೆಪಿಯ ಚುನ್ನಿಲಾಲ್ ಗರಸಿಯಾ ಮತ್ತು ಮದನ್ ರಾಥೋಡ್ ಸೇರಿದ್ದಾರೆ.