ಜಾತಿಗಣತಿ ಬಿಡುಗಡೆಯಿಂದ ಮೀಸಲಾತಿ ನೀಡಲು ಅನುಕೂಲ:ಜಿ.ಪರಮೇಶ್ವರ್

ಬೆಂಗಳೂರು: ಜಾತಿಗಣತಿ ಬಿಡುಗಡೆಯಿಂದ ಮೀಸಲಾತಿ ನೀಡಲು ಅನುಕೂಲ ಆಗಲಿದೆ.ಹೀಗಾಗಿನಮ್ಮ ಸರ್ಕಾರ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಲಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಈ ವಿಚಾರವಾಗಿ ನಗರದಲ್ಲಿಂದು ಮಾತನಾಡಿದ ಸಚಿವರು, ಸರ್ಕಾರ ಗಣತಿ ಮಾಡುವ ಜವಾಬ್ದಾರಿ ಸಮಿತಿಗೆ ಕೊಟ್ಟಿತ್ತು. ಜಾತಿಗಣತಿಗೆ 100 ಕೋಟಿ ರೂ.ಗೂ ಹೆಚ್ಚು ಹಣ ಖರ್ಚಾಗಿದೆ. ಇಷ್ಟೆಲ್ಲ ಹಣ ಖರ್ಚು ಮಾಡಿ ವರದಿ ಕೊಡದೇ ಹೋದರೆ ಸರ್ಕಾರಕ್ಕೆ ಅಷ್ಟು ಹಣ ವೇಸ್ಟ್ ಆಗುತ್ತದೆ. ಒಂದು ಉದ್ದೇಶ ಇಟ್ಟುಕೊಂಡು ಜಾತಿಗಣತಿ ಮಾಡಲಾಗಿದೆ. ಸುಮ್ಮನೆ ಸರ್ಕಾರದ ಹಣ ಪೋಲಾಗಲು ಜಾತಿಗಣತಿ ಮಾಡಿಲ್ಲ. ಜಾತಿಗಣತಿಯಿಂದ ಶಾಶ್ವತ ಮಾಹಿತಿ ಇರಲಿ. ಮುಂದೆ ಮೀಸಲಾತಿ ಮಾಡುವ ಸಮಯದಲ್ಲಿ ಇದು ಅನುಕೂಲವಾಗಲಿದೆ.ರಾಜ್ಯದಲ್ಲಿ 50% ಕ್ಕಿಂತ ಹೆಚ್ಚು ಮೀಸಲಾತಿ ಮಾಡಬೇಕು ಅಂತ ಒತ್ತಾಯ ಇದೆ. ವರದಿಯಿಂದ ಇದಕ್ಕೆಲ್ಲ ಅನುಕೂಲ ಆಗಲಿದೆ ಎಂದರು.
ಜಾತಿ ಗಣತಿಯನ್ನು ನಮ್ಮ ಸರ್ಕಾರ ಬಿಡುಗಡೆ ಮಾಡುತ್ತದೆ. ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಆದಷ್ಟು ಬೇಗ ವರದಿ ಸರ್ಕಾರಕ್ಕೆ ಕೊಡುತ್ತೇನೆ ಎಂದು ಹೇಳಿದ್ದಾರೆ. ಆ ವರದಿ ಬಂದ ಮೇಲೆ ಚರ್ಚೆ ಮಾಡುತ್ತೇವೆ. ವರದಿ ಬಂದರೆ ಯಾವ ಯಾವ ಸಮುದಾಯಗಳು ಎಷ್ಟು ಇದ್ದಾರೆ ಎನ್ನುವುದು ಗೊತ್ತಾಗುತ್ತದೆ. ಪ್ರಣಾಳಿಕೆಯಲ್ಲೂ ನಾವು ವರದಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದೆವು. ಅದರಂತೆ ಅಧ್ಯಕ್ಷರು ವರದಿ ಕೊಟ್ಟ ಬಳಿಕ ಸರ್ಕಾರ ತೀರ್ಮಾನ ಮಾಡಲಿದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.