ರೇಣುಕಾಚಾರ್ಯರ ಸಮಯ ಪ್ರಜ್ಞೆಯಿಂದ 20 ರೋಗಿಗಳು ಪ್ರಾಣಾಪಾಯದಿಂದ ಪಾರು
13/05/2021
ದಾವಣಗೆರೆ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದ್ದು, ಸುಮಾರು 20 ರೋಗಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ 1 ಗಂಟೆಯ ಸುಮಾರಿಗೆ ಆಕ್ಸಿಜನ್ ಕೊರತೆಯಾಗಿದೆ. ಈ ವಿಚಾರ ತಿಳಿದ ಕೂಡಲೇ ರೇಣುಕಾಚಾರ್ಯ ಹೊನ್ನಾಳಿ ಪಟ್ಟಣದಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿದ್ದು, ಈ ವೇಳೆ ಕೇವಲ 3 ಗಂಟೆಗೆ ಸಾಕಾಗುವಷ್ಟು ಮಾತ್ರವೇ ಆಕ್ಸಿಜನ್ ಇವೆ ಎನ್ನುವುದು ತಿಳಿದು ಬಂದಿತ್ತು.
ತಕ್ಷಣವೇ ಖಾಲಿ ಸಿಲಿಂಡರ್ ಗಳನ್ನು ಹರಿಹರಕ್ಕೆ ಸಾಗಿಸಿ, ಹರಿಹರದ ಸದರನ್ ಗ್ಯಾಸ್ ರೀಫಿಲ್ಲಿಂಗ್ ಘಟಕದಲ್ಲಿ ಆಕ್ಸಿಜನ್ ತುಂಬಿಸಿ, ಮತ್ತೆ ಹೊನ್ನಾಳಿಗೆ ತಲುಪಿದ್ದು, ತಕ್ಷಣವೇ ರೋಗಿಗಳಿಗೆ ಆಕ್ಸಿಜನ್ ನೀಡಲಾಗಿದೆ ಎಂದು ವರದಿಯಾಗಿದೆ.
ಶಾಸಕರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ. ಶಾಸಕರ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.




























