ಹಠಾತ್ ಸಾವು ಪ್ರಕರಣ: ಸರ್ಕಾರ ರಚಿಸಿದ ಸಮಿತಿಯಿಂದ 3 ತಿಂಗಳೊಳಗೆ ವರದಿ ಸಲ್ಲಿಕೆ ಸಾಧ್ಯತೆ! - Mahanayaka

ಹಠಾತ್ ಸಾವು ಪ್ರಕರಣ: ಸರ್ಕಾರ ರಚಿಸಿದ ಸಮಿತಿಯಿಂದ 3 ತಿಂಗಳೊಳಗೆ ವರದಿ ಸಲ್ಲಿಕೆ ಸಾಧ್ಯತೆ!

sudden death
17/05/2025


Provided by

ಬೆಂಗಳೂರು: ಯುವಜನರ ಹಠಾತ್ ಸಾವಿಗೂ ಮತ್ತು ಕೋವಿಡ್–19 ಲಸಿಕೆಯ ನಡುವಿನ ಸಂಬಂಧ ಅಧ್ಯಯನ ಮಾಡಲು ಕರ್ನಾಟಕ ಸರ್ಕಾರ ರಚಿಸಿರುವ ತಜ್ಞರ ಸಮಿತಿ ಮೂರು ತಿಂಗಳಲ್ಲಿ ವರದಿ ಸಲ್ಲಿಸುವ ಸಾಧ್ಯತೆ ಇದೆ ಎಂದು ವರದಿಗಳಿಂದ ತಿಳಿದು ಬಂದಿದೆ.

ಕೋವಿಡ್ ಲಸಿಕೆಯ ಬಳಿಕ ಯುವಕರು ಮತ್ತು ಮಧ್ಯವಯಸ್ಕರ ಹಠಾತ್ ಸಾವು(Sudden Death) ಗಳ ಹಿನ್ನೆಲೆ ಸಾರ್ವಜನಿಕರು ವ್ಯಾಪಕ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಠಾತ್ ಸಾವುಗಳ ಬಗ್ಗೆ ತಜ್ಞರ ಸಮಿತಿಯಿಂದ ವರದಿ ಸಲ್ಲಿಸಲು ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ನೀಡಿದ ಸೂಚನೆಯ ಮೇರೆಗೆ ಫೆಬ್ರವರಿಯಲ್ಲಿ 10 ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು.
ಈ ಹಠಾತ್ ಸಾವು ಮತ್ತು ಕೋವಿಡ್ –19 ಲಸಿಕೆಯ ನಡುವಿನ ಸಂಬಂಧವನ್ನು ಕಂಡುಹಿಡಿಯುವಂತೆ ಕೋರಿ ಹಿರಿಯ ಪತ್ರಕರ್ತ ರಾಜಾರಾಮ್ ತಲ್ಲೂರ್ ಅವರು ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದರು.

ಸಮಿತಿ ರಚನೆಯಾದಾಗಿನಿಂದ, ಏಪ್ರಿಲ್ ನಲ್ಲಿ ಒಮ್ಮೆ ಮಾತ್ರ ಸಭೆ ಸೇರಿದೆ. ಇದರ ನಡುವೆಯೇ ಇದೀಗ 34 ವರ್ಷದ ಯುವ ನಟ ರಾಕೇಶ್ ಪೂಜಾರಿ ಅವರು ಇತ್ತೀಚೆಗೆ ಸಡನ್ ಡೆತ್ ಆಗಿದ್ದಾರೆ. ಯಾವುದೇ ಅನಾರೋಗ್ಯದ ಹಿನ್ನೆಲೆ ಇಲ್ಲದಿದ್ದರೂ ಮೆಹಂದಿ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡುತ್ತಿದ್ದ ರಾಕೇಶ್ ಪೂಜಾರಿ ಕುಸಿದು ಮೃತಪಟ್ಟಿದ್ದರು.

ವರದಿಗಳ ಪ್ರಕಾರ ಸಮಿತಿಯ ಸದಸ್ಯರೊಬ್ಬರು ಮಾತನಾಡಿ, ಸಮಿತಿಯು ಕಳೆದ ಮೂರು ತಿಂಗಳುಗಳಲ್ಲಿ ಸಂಭವಿಸಿದ ಸಾವುಗಳಿಗೆ ಸಂಬಂಧಿಸಿದ ಡೇಟಾವನ್ನು ಸರ್ಕಾರದಿಂದ ಕೋರಿದೆ. ಇದರಲ್ಲಿ ಹಿಂದಿನ ಕೋವಿಡ್ –19 ಸೋಂಕು ಮತ್ತು ಲಸಿಕೆ ಸ್ಥಿತಿಯ ಮಾಹಿತಿಯೂ ಸೇರಿದೆ. ಯುವಜನರಲ್ಲಿನ ಸಾವುಗಳು ಮತ್ತು ಕೋವಿಡ್ –19 ಅಥವಾ ಅದರ ಲಸಿಕೆಗಳ ನಡುವೆ ಯಾವುದೇ ಸಂಬಂಧವಿದೆಯೇ ಅಥವಾ ಇವು ಪ್ರತ್ಯೇಕ ಘಟನೆಗಳೇ ಎಂಬುದನ್ನು ನಿರ್ಧರಿಸಲು ಸಮಿತಿಯು ಈ ಡೇಟಾ ವಿಶ್ಲೇಷಿಸಲು ಉದ್ದೇಶಿಸಿದೆ ಎಂದು ಹೇಳಿದ್ದಾರೆ.

ಕಳೆದ ಮೂರು ತಿಂಗಳಲ್ಲಿ ನಿಧನರಾದ ವ್ಯಕ್ತಿಗಳ ಪ್ರಕರಣಗಳ ವಿವರಗಳನ್ನು ಕೋರಲಾಗಿದೆ ಎಂದು ಸಮಿತಿಯ ನೇತೃತ್ವ ವಹಿಸಿರುವ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಕೆ. ಎಸ್. ರವೀಂದ್ರನಾಥ್ ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಲಭ್ಯವಾಗಿರುವ ಮಾಹಿತಿಯು ಪರಸ್ಪರ ಸಂಬಂಧವನ್ನು ಸೂಚಿಸದಿದ್ದರೂ, ಯಾವುದೇ ಸಂಭಾವ್ಯ ಸಂಶೋಧನೆಗಳನ್ನು ಖಚಿತಪಡಿಸಿಕೊಳ್ಳಲು ಎಲ್ಲ ಸಾವುಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಲಾಗುವುದು ಎಂದ ಅವರು, ವರದಿ ಸಲ್ಲಿಕೆಗೆ ಮೂರು ತಿಂಗಳ ಕಾಲಮಿತಿ ಇದೆ ಎಂದು ಪುನರುಚ್ಚರಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ