ಅದಾನಿ ಅವ್ಯವಹಾರದ ಬಗ್ಗೆ ಸಂಜಯ್ ಸಿಂಗ್ ಪ್ರಸ್ತಾಪಿಸಿದ್ದಕ್ಕೆ ಕೇಂದ್ರದಿಂದ ಸೇಡಿನ ರಾಜಕಾರಣ: ಎಎಪಿ

ಬೆಂಗಳೂರು: ರಾಜ್ಯಸಭೆಯಲ್ಲಿ ಅದಾನಿ ಅವ್ಯವಹಾರಗಳ ಬಗ್ಗೆ ಧ್ವನಿ ಎತ್ತಿದ ಕಾರಣಕ್ಕೆ ಸಂಸದ ಸಂಜಯ್ ಸಿಂಗ್ ಅವರ ವಿರುದ್ಧ ಷಡ್ಯಂತ್ರದಿಂದ ಸಾಕ್ಷ್ಯಾಧಾರಗಳಿಲ್ಲದ ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಿರುವುದು ನಾಚಿಕೆಗೇಡಿನ ವಿಚಾರ. ಇದೊಂದು ಹೇಡಿತನದ ಕೃತ್ಯ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕಿಡಿಕಾರಿದರು.
ಅಬಕಾರಿ ನೀತಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಎಎಪಿ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ನಗರದಲ್ಲಿ ಗುರುವಾರ ಮೊಂಬತ್ತಿ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೇಂದ್ರ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ತಮ್ಮ ವಿರುದ್ಧ ಧ್ವನಿ ಎತ್ತಿದವರನ್ನು ಹತ್ತಿಕುವ ಪ್ರಯತ್ನ ನಡೆಸುತ್ತಿದೆ. ಇದಕ್ಕಾಗಿ ಸಂವಿಧಾನ ವಿರೋಧಿ ಕೃತ್ಯಗಳನ್ನು ನಡೆಸುತ್ತಿದೆ. ಕಳೆದ ಒಂದೂವರೆ ವರ್ಷದಿಂದ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಆದರೆ ಹಗರಣಕ್ಕೆ ಸಂಬಂಧಿಸಿ ಇದುವರೆಗೆ ಒಂದು ರೂಪಾಯಿ ಭ್ರಷ್ಟಾಚಾರದ ದುಡ್ಡನ್ನು ವಶಪಡಿಸಿಕೊಂಡಿಲ್ಲ. ಭ್ರಷ್ಟಾಚಾರವೇ ನಡೆಯದ ಮೇಲೆ ಅಕ್ರಮ ಹಣವನ್ನು ಅಧಿಕಾರಿಗಳಿಗೆ ವಶ ಪಡಿಸಿಕೊಳ್ಳಲು ಹೇಗೆ ತಾನೆ ಸಾಧ್ಯವಾಗುತ್ತದೆ? ಎಂದು ಡಾ. ಸತೀಶ್ ಪ್ರಶ್ನಿಸಿದರು.
ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕಾರಣ ಮಾಡಬೇಕೇ ವಿನಃ ಅಧಿಕಾರದ ದರ್ಪದಲ್ಲಿ ತನ್ನ ಅದೀನದಲ್ಲಿ ಬರುವ ಕೇಂದ್ರ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಖಂಡನಾರ್ಹ. ತಕ್ಷಣ ಸಂಜಯ್ ಸಿಂಗ್ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ಮುಖಂಡ ವಿಜಯ್ ಶರ್ಮಾ, ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ, ರಾಜ್ಯ ಕಾರ್ಯದರ್ಶಿ ಉಷಾ ಮೋಹನ್, ಚಂದನ್ ಶೆಟ್ಟಿ ಜ್ಯೋತಿಶ್ ಕುಮಾರ್, ಶಿವಕುಮಾರ್ ,ಅನಿಲ್ ನಾಚಪ್ಪ , ಮಂಜುರಾವ್ ಪಾಪಣ್ಣ, ಸಿದ್ದು ,ಉಪಾಧ್ಯಾಯ ಇರ್ಷಾದ್ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.