ಮಧ್ಯಪ್ರಾಚ್ಯದ ಯುದ್ಧವನ್ನು ರಷ್ಯಾ ದುರುಪಯೋಗಪಡಿಸಿಕೊಳ್ಳುತ್ತಿದೆ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಆತಂಕ
ಕೈವ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ರಷ್ಯಾ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಗಂಭೀರ ಆರೋಪ ಮಾಡಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಇತ್ತೀಚೆಗೆ ನಡೆಸಿದ ಭೀಕರ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಜಗತ್ತಿನ ಗಮನ ಮಧ್ಯಪ್ರಾಚ್ಯದತ್ತ ಇರುವುದನ್ನು ಬಳಸಿಕೊಂಡು, ಯುರೋಪ್ ಮತ್ತು ಉಕ್ರೇನ್ ನಲ್ಲಿ ಹೆಚ್ಚಿನ ವಿನಾಶ ಉಂಟುಮಾಡಲು ರಷ್ಯಾ ಸಂಚು ರೂಪಿಸುತ್ತಿದೆ ಎಂದು ಝೆಲೆನ್ಸ್ಕಿ ಎಚ್ಚರಿಸಿದ್ದಾರೆ.
ಶನಿವಾರದಂದು ರಷ್ಯಾ ಸುಮಾರು 500 ವಿವಿಧ ಮಾದರಿಯ ಡ್ರೋನ್ ಗಳು ಮತ್ತು ಕ್ಷಿಪಣಿಗಳನ್ನು ಉಕ್ರೇನ್ ಮೇಲೆ ಪ್ರಯೋಗಿಸಿದೆ. ಇದರಲ್ಲಿ 430 ಡ್ರೋನ್ ಗಳು ಮತ್ತು 68 ಕ್ಷಿಪಣಿಗಳು ಸೇರಿದ್ದವು. ಉಕ್ರೇನ್ ನ ವಾಯು ರಕ್ಷಣಾ ವ್ಯವಸ್ಥೆಯು ಹೆಚ್ಚಿನ ದಾಳಿಗಳನ್ನು ತಡೆದಿದ್ದರೂ, ಕನಿಷ್ಠ 6 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ.
ಕೈವ್, ಸುಮಿ, ಖಾರ್ಕಿವ್ ಮತ್ತು ಮೈಕೋಲೈವ್ ಪ್ರಾಂತ್ಯಗಳ ಇಂಧನ ಮೂಲಸೌಕರ್ಯ, ಶಾಲೆಗಳು ಮತ್ತು ವಸತಿ ಸಮುಚ್ಚಯಗಳನ್ನು ಗುರಿಯಾಗಿಸಿಕೊಂಡು ರಷ್ಯಾ ದಾಳಿ ನಡೆಸಿದೆ.
ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಎದುರಿಸಲು ಉಕ್ರೇನ್ ಗೆ ಹೆಚ್ಚಿನ ವಾಯು ರಕ್ಷಣಾ ಕ್ಷಿಪಣಿಗಳ ಅಗತ್ಯವಿದೆ ಎಂದು ಝೆಲೆನ್ಸ್ಕಿ ವಿಶ್ವ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.
ಅಮೆರಿಕದ ನೆಲೆಗಳ ಮೇಲೆ ದಾಳಿ ಮಾಡಲು ಇರಾನ್ ರಷ್ಯಾ ನಿರ್ಮಿತ ‘ಶಾಹೆದ್’ (Shahed) ಡ್ರೋನ್‌ಗಳನ್ನು ಬಳಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ರಷ್ಯಾ ಈಗ ಸ್ವತಃ ಈ ಡ್ರೋನ್ ಗಳನ್ನು ತಯಾರಿಸುತ್ತಿದ್ದು, ಅವುಗಳನ್ನು ಉಕ್ರೇನ್ ವಿರುದ್ಧವೂ ಬಳಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ದಾಳಿಯು ಉಕ್ರೇನ್ ನ ಇಂಧನ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುವ ಉದ್ದೇಶವನ್ನು ಹೊಂದಿತ್ತು ಎಂದು ವರದಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























