ಸಾವಿನ ಮನೆಯಲ್ಲಿ ಜಗಳ ಹಚ್ಚಬೇಡಿ ಸಂಸದೆ ಶೋಭಾ ಕರಂದ್ಲಾಜೆಯವರೇ… - Mahanayaka
3:05 PM Wednesday 17 - September 2025

ಸಾವಿನ ಮನೆಯಲ್ಲಿ ಜಗಳ ಹಚ್ಚಬೇಡಿ ಸಂಸದೆ ಶೋಭಾ ಕರಂದ್ಲಾಜೆಯವರೇ…

shobha karandlaje
19/05/2021

ಕೊರೊನಾ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಕ್ರೈಸ್ತರನ್ನು ಗುರಿಯಾಗಿಸಿ ಹೇಳಿಕೆ ನೀಡಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಚರ್ಚ್ ನಲ್ಲಿ ವ್ಯಾಕ್ಸಿನ್ ಪಡೆದುಕೊಳ್ಳಬೇಡಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಮತಾಂತರವಾದವರಿಗೆ ಈ ರೀತಿಯಾಗಿ ಹೇಳಲಾಗುತ್ತಿದೆ. ಆದರೆ ಉಳಿದವರು ಪಡೆದುಕೊಳ್ಳುತ್ತಿದ್ದಾರೆ ಎಂಬ ಹೇಳಿಕೆಯನ್ನು ಸಂಸದೆ ಶೋಭಾ ಕರಂದ್ಲಾಜೆ ನೀಡುವ ಮೂಲಕ ಕೊರೊನಾ ವೈರಸ್ ಹಾವಳಿಯ ಮಧ್ಯೆಯೇ ಕೋಮು ವೈರಸ್ ಹರಡಲು ಮುಂದಾಗಿರುವುದು ಎಷ್ಟು ಸರಿ?


Provided by

ಒಬ್ಬ ಸಂಸದೆಯಾಗಿ ತಮ್ಮದೇ ಪಕ್ಷದ ಸರ್ಕಾರ ರಾಜ್ಯದಲ್ಲಿ ಕೂಡ ಇರುವಾಗ, ಎಲ್ಲಿಯಾದರೂ ಕೊರೊನಾ ವ್ಯಾಕ್ಸಿನ್ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದರೆ, ಅಂತವರ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸುವುದು ಬಿಟ್ಟು, ಚರ್ಚ್ ನಲ್ಲಿ ಮತಾಂತರ ಹೊಂದಿದವರಿಗೆ ವ್ಯಾಕ್ಸಿನ್ ಪಡೆದುಕೊಳ್ಳದಂತೆ ಹೇಳಿ, ಇತರರು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡುತ್ತಿರುವುದು ಖಂಡನೀಯವಾಗಿದೆ.

ಶೋಭಾ ಕರಂದ್ಲಾಜೆಯವರೇ.. ಕೊರೊನಾ ವೈರಸ್ ನಿಯಂತ್ರಿಸಿ, ಅದು ಬಿಟ್ಟು ಕೋಮು ವೈರಸ್ ಹಬ್ಬಿಸುವ ಕೆಲಸ ಮಾಡಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕದಲ್ಲಿ ವ್ಯಾಕ್ಸಿನ್ ಕೊರತೆ ಎದುರಾದಾಗ ಸಂಸದೆ ಶೋಭಾ ಕರಂದ್ಲಾಜೆ ಎಲ್ಲಿದ್ದರು? ಜನರು ಆಕ್ಸಿಜನ್ ಸಿಗದೇ, ಬೆಡ್ ಸಿಗದೇ ಇದ್ದಾಗ ಶೋಭಾ ಕರಂದ್ಲಾಜೆ ಎಲ್ಲಿದ್ದರು? ಜನ ಸೇವೆ ಎಂದರೆ, ಕೇವಲ ಕೋಮು ಹೇಳಿಕೆ ನೀಡುವುದು ಎಂದು ಶೋಭಾ ಕರಂದ್ಲಾಜೆ ತಿಳಿದುಕೊಂಡಿರುವಂತಿದೆ. ರಾಜ್ಯ ಕೊರೊನಾದ ಹೊಡೆತಕ್ಕೆ ಸಿಲುಕಿದಾಗ ಜನರಿಗೆ ಕನಿಷ್ಠ ಸಾಂತ್ವನ ಹೇಳಲು ಕೂಡ ಯಾರು ಇರಲಿಲ್ಲ ಶೋಭಾ ಕರಂದ್ಲಾಜೆಯವರೇ…!ಆಂಬುಲೆನ್ಸ್ ನಿಂದ ಇಳಿಯುತ್ತಿದ್ದ ಮೃತದೇಹ ಯಾವ ಜಾತಿಯವನದ್ದು, ಯಾವ ಧರ್ಮದವನದ್ದು ಎಂದು ನೋಡಲು ಕೂಡ ಯಾರು ಇರಲಿಲ್ಲ ಶೋಭಾ ಕರಂದ್ಲಾಜೆ ಅವರೇ… ನೀವು ಇದಕ್ಕೂ ಮೊದಲು ಸಾಕಷ್ಟು ಬಾರಿ ಕೋಮು ಪ್ರೇರಿತ ಹೇಳಿಕೆ ನೀಡಿದಾಗಲೂ ಜನರು ಅದನ್ನು ಹಾಸ್ಯವಾಗಿಯೇ ಪರಿಗಣಿಸಿ, ಸುಮ್ಮನಾಗಿದ್ದಾರೆ. ಆದರೆ, ಕೊರೊನಾ ಸಂದರ್ಭದಲ್ಲಿ ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿನರಳುತ್ತಿದ್ದಾರೆ. ಆಸ್ಪತ್ರೆಗೆ ಬರಲು ಭಯ, ದುಡ್ಡಿನ ಸಮಸ್ಯೆಯಿಂದ ಎಷ್ಟೋ ಜನರು ಜ್ವರವನ್ನು ನುಂಗಿಕೊಂಡು ಗ್ರಾಮಗಳಲ್ಲಿ ಬದುಕುತ್ತಿದ್ದಾರೆ. ನಿಮಗೆ ಕನಿಷ್ಠ ಮಾನವೀಯತೆ ಇದ್ದರೂ ಕೂಡ ನೀವು ಗ್ರಾಮಕ್ಕೆ ಹೋಗಿ ಕಣ್ತೆರೆದು ನೋಡಿ. ಕನಿಷ್ಠ ನಿಮಗೆ ಓಟು ಹಾಕಿದ ಜನರ ಮನೆಗಳಿಗಾದರೂ ಭೇಟಿ ನೀಡಿ. ಅದು ಬಿಟ್ಟು ಕೋಮುದ್ವೇಷ ಹರಡಲು ಈ ಸಮಯವನ್ನು ಉಪಯೋಗಿಸುವುದು ಸರಿಯಲ್ಲ.

ಗೋಮೂತ್ರ ಕುಡಿಯಿರಿ, ಕೊರೊನಾ ಹೋಗುತ್ತದೆ ಎಂದು ಕೆಲವರು ಬೊಬ್ಬೆ ಹೊಡೆಯುತ್ತಿದ್ದಾರೆ. ನಿಮಗೆ ಅದು ಕೊರೊನಾ ಮಾರ್ಗ ಸೂಚಿಯ ಪ್ರಕಾರ ಕಾಣುತ್ತದೆಯೇ ಸಂಸದರೇ? ನೀವು ಅದನ್ನು ಯಾಕೆ ವಿರೋಧಿಸುತ್ತಿಲ್ಲ? ಪೌರ ಕಾರ್ಮಿಕರು ಕುಡಿಯಲು ನೀರು ಕೇಳಿದರೆ, ನೀನು ನಮ್ಮ ಗೇಟ್ ಮುಟ್ಟಬೇಡ ಮೈಲಿಗೆ ಆಗುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಅದರ ಬಗ್ಗೆಯೂ ಸ್ವಲ್ಪ ಮಾತನಾಡುತ್ತೀರಾ? ಇಡೀ ದೇಶದಲ್ಲಿ ಜನರು ಸಾವನ್ನಪ್ಪಿ ಅನಾಥ ಶವವಾಗಿ ಹೊತ್ತಿಉರಿದುಹೋಗುವ ಸಂದರ್ಭದಲ್ಲಿ ನಿಮ್ಮದೇ ಪಕ್ಷದ ಶಾಸಕರೊಬ್ಬರು “ನಾನು ಇಸ್ರೆಲ್ ಪರವಾಗಿ ನಿಲ್ಲುತ್ತೇನೆ” ಎಂದು ಟ್ವೀಟ್ ಮಾಡುತ್ತಾರೆ. ಇದು ನಿಮಗೆ ಕಾಣುತ್ತಿಲ್ಲವೇ? ನಿಮ್ಮ ಕೋಮು ದೃಷ್ಟಿಯನ್ನು ಬದಲಿಸಿಕೊಳ್ಳಿ. ಕೊರೊನಾದಿಂದ ಎಲ್ಲ ಧರ್ಮ, ಎಲ್ಲಾ ಜಾತಿಯವರು ಸಾಕಷ್ಟು ಅನುಭವಿಸಿದ್ದಾರೆ. ಸಾಕಷ್ಟು ಕಳೆದುಕೊಂಡಿದ್ದಾರೆ. ಎಷ್ಟೋ ಮಕ್ಕಳು ತಬ್ಬಲಿಗಳಾಗಿದ್ದಾರೆ. ಎಷ್ಟೋ ತಂದೆ ತಾಯಿ ಮಕ್ಕಳನ್ನು ಕಳೆದುಕೊಂಡಿದ್ದಾರೆ. ನಿಮ್ಮ ರಾಜಕೀಯ ನೀವು ಮಾಡಿ, ಬೇಡ ಎಂದು ಯಾರೂ ಹೇಳುವುದಿಲ್ಲ. ಆದರೆ ಈ ಕೊರೊನಾ ಎನ್ನುವ ಮಹಾಮಾರಿ, ಹೋಗುವವರೆಗೆ ದಯವಿಟ್ಟು ಕೋಮು ದ್ವೇಷ ಹರಡಬೇಡಿ ಎನ್ನುವುದಷ್ಟೇ ನಮ್ಮ ಕಳಕಳಿ.

25 ಬಿಜೆಪಿ ಸಂಸದರನ್ನು ರಾಜ್ಯದಿಂದ ಆರಿಸಿ ಲೋಕಸಭೆಗೆ ಕಳುಹಿಸಿದ್ದರೂ, ಕರ್ನಾಟಕ ಸಂಕಷ್ಟದಲ್ಲಿರುವಾಗ ಒಬ್ಬನೇ ಒಬ್ಬ ಸಂಸದಗೆ ಕರ್ನಾಟಕದ ಪರವಾಗಿ ಮಾತನಾಡುವ ಧೈರ್ಯವಿಲ್ಲ.  ರಾಜ್ಯದ ಜಿಎಸ್ ಟಿ ಪಾಲನ್ನು ಕೇಳುವ ಎದೆಗಾರಿಕೆ ಇಲ್ಲ. ಕೇವಲ ಹೈವೆಗಳನ್ನು ಉದ್ಘಾಟಿಸುವುದಷ್ಟೇ ನಮ್ಮ ಸಾಧನೆ ಎಂದು ಸಂಸರು ಮಾತನಾಡುತ್ತಿದ್ದಾರೆ. ಕೇವಲ ಕೋಮು ವೈರಸ್ ಹರಡುವುದಷ್ಟೇ ನಿಮ್ಮ ಸಾಮರ್ಥ್ಯವೇ? ಮೊನ್ನೆಯಷ್ಟೇ ಒಬ್ಬರು ಸಂಸದರು, ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿದರು. ಇದೀಗ ಶೋಭಾ ಕರಂದ್ಲಾಜೆ ಅವರು ಕ್ರೈಸ್ತರನ್ನು ಗುರಿಯಾಗಿಸುತ್ತಿದ್ದಾರೆ. ಸರ್ಕಾರ, ಅಧಿಕಾರ ನಿಮ್ಮ ಕೈಗಳಲ್ಲಿದೆ. ಕೊರೊನಾ ನಿಯಂತ್ರಣವೂ ನಿಮ್ಮ ಕೈಯಲ್ಲಿರುವಾಗ ಯಾರನ್ನೋ ಗುರಿಯಾಗಿರುವುದು, ಸಾವಿನ  ಮನೆಯಲ್ಲಿಜಗಳ ಹಚ್ಚುವುದು  ಎಷ್ಟು ಸರಿ. ನಿಮಗೆ ರಾಜ್ಯದ ಪರವಾಗಿ ನಿಲ್ಲುವ ಸಾಮರ್ಥ್ಯವಿಲ್ಲದಿದ್ದರೆ, ಸಮ್ಮನಿರಿ, ಆದರೆ ಕೊರೊನಾ ವೈರಸ್ ನಿಂದ ತತ್ತರಿಸಿರುವ ಸಂದರ್ಭದಲ್ಲಿ ಕೋಮು ವೈರಸ್ ಹರಡದಿದ್ದಾರೆ. ರಾಜ್ಯದ ಜನತೆಗೆ ಮಹದುಪಕಾರ ಮಾಡಿದಂತಾಗುತ್ತದೆ.

ಸಂಪಾದಕೀಯ

-ಮಹಾನಾಯಕ ಬಳಗ

ಇತ್ತೀಚಿನ ಸುದ್ದಿ