ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ! - Mahanayaka
11:49 AM Wednesday 29 - October 2025

ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ!

u t khadar
29/10/2025

ಬೆಂಗಳೂರು: ಸ್ಪೀಕರ್ ಯು.ಟಿ.ಖಾದರ್ ವಿರುದ್ಧ  ಪ್ರತಿಪಕ್ಷ ಬಿಜೆಪಿ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದು, ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹಿಸಿದೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭೆಯ ಪ್ರಧಾನ ಬಾಗಿಲಿಗೆ ರೋಸ್‌ವುಡ್‍ನ ಮರದ ಕೆತ್ತನೆಯ ಚೌಕಟ್ಟನ್ನು ಮಾಡಿಸಿದಲ್ಲಿಂದ ಭ್ರಷ್ಟಾಚಾರದ ಆರೋಪಗಳು ಆರಂಭವಾಗಿತ್ತು. ತಮಗೆ ಬೇಕಾದವರಿಗೆ ಬಾಗಿಲು ಮಾಡುವ ಕೆಲಸ ನೀಡಿದ್ರು. ಸಭಾಂಗಣಕ್ಕೆ ಹೊಸ ಟಿ.ವಿ. ಸೆಟ್ ಅನ್ನು ಅಳವಡಿಸಿದ್ದರು. ಎಐ ಮಾನಿಟರ್ ಸಿಸ್ಟಂ ಅನ್ನು ಹಾಕಲು ಸಾಕಷ್ಟು ಖರ್ಚು ವೆಚ್ಚಗಳಾಗಿವೆ. ಎಲ್ಲ ಶಾಸಕರಿಗೆ ಗಂಡಭೇರುಂಡ ಹೋಲಿಕೆಯ ಗಡಿಯಾರಗಳನ್ನು ಕೊಟ್ಟರು. ಮೊಗಸಾಲೆಯಲ್ಲಿ ಮಸಾಜ್ ಪಾರ್ಲರ್ ರೀತಿ ರಿಕ್ಲೇನರ್ ಚೇರ್, ಮಸಾಜ್ ಚೇರ್ ಹಾಕಿಸಿದ್ರು. ಇದಕ್ಕೆ ಶಾಸಕರು, ಮಂತ್ರಿಗಳೇ ವಿರೋಧ ಮಾಡಿದ್ದಾರೆ ಎಂದರು.

ಸರ್ಕಾರದ ವತಿಯಿಂದ ಊಟ, ಉಪಹಾರ ಕೊಡಲು ಸ್ಪೀಕರ್ ಆರಂಭಿಸಿದರು. ಇದು ಅಗತ್ಯವಿತ್ತೇ? ಎಂದು ಕೇಳಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಹಾಸು ಹೊದಿಕೆ ಬದಲಿಸಿ, ಕಾರ್ಪೆಟ್ ಹಾಕಿಸಿದ್ರು, ಇದರಲ್ಲೆಲ್ಲ ಏನೋ ಅನುಮಾನ ಬರುತ್ತದೆ ಎಂದು ಹೇಳಿದರು.

ಶಾಸಕರ ಭವನದಲ್ಲಿ ಶಾಸಕರ ಕೊಠಡಿಗಳನ್ನು ಭದ್ರಪಡಿಸಲು, ಇನ್ನಷ್ಟು ವ್ಯವಸ್ಥೆ ಕಲ್ಪಿಸಿಕೊಡಲು ಸ್ಮಾರ್ಟ್ ಡೋರ್ ಲಾಕರ್ ಹಾಕಿಸಿದರು. ಇದಕ್ಕೆ ರೂ. 49 ಸಾವಿರ ವೆಚ್ಚ ತೋರಿಸಿದ ಖಾದರ್, ಸ್ಮಾರ್ಟ್ ಸೇಫ್ ಲಾಕರ್ ಹಾಕಿಸಿದರು. ಮಾರ್ಕೆಟ್‍ನಲ್ಲಿ ರೂ. 10-15 ಸಾವಿರಕ್ಕೆ ಸಿಗುವ ಸ್ಮಾರ್ಟ್ ಸೇಫ್ ಲಾಕರ್ ಗೆ ರೂ. 35 ಸಾವಿರ ದರ ವಿಧಿಸಿದ್ದಾರೆ ಎಂದು ಆರೋಪಿಸಿದರು.

ಮಾರುಕಟ್ಟೆಯಲ್ಲಿ ಸುಮಾರು 30 ಸಾವಿರಕ್ಕೆ ಲಭ್ಯ ಇರುವ ಸ್ಮಾರ್ಟ್ ಎನರ್ಜಿ ಸೊಲ್ಯೂಷನ್‌ ಗೆ 90,500 ರೂ. ವಿಧಿಸಿದ್ದಾರೆ. ಸ್ಟೇನ್‍ ಲೆಸ್ ಸ್ಟೀಲ್ ವಾಟರ್ ಪ್ಯೂರಿಫೈಯರ್ ಆನ್‍ ಲೈನ್‍ ನಲ್ಲಿ 16 ಸಾವಿರದಿಂದ 53 ಸಾವಿರದಲ್ಲಿ ಲಭ್ಯವಿದ್ದು, 65 ಸಾವಿರ ವಿಧಿಸಲಾಗಿದೆ. ಒಟ್ಟು 235 ರಷ್ಟು ಖರೀದಿ ಆಗಿದೆ. 123 ಸ್ಮಾರ್ಟ್ ಎನರ್ಜಿ ಸೊಲ್ಯೂಷನ್ ಖರೀದಿ ಮಾಡಿದ್ದಾರೆ. 224 ಸೇಫ್ ಲಾಕರ್, ಅಷ್ಟೇ ಸಂಖ್ಯೆಯ ಡೋರ್ ಲಾಕರ್ ಖರೀದಿ ಮಾಡಿದ್ದಾರೆ ಎಂದು ತಿಳಿಸಿದರು.

ಇನ್ನೂ 4–5 ದಿನಗಳ ಪುಸ್ತಕ ಮೇಳಕ್ಕೆ 4.5 ಕೋಟಿ ಖರ್ಚು ಮಾಡಿದ್ದಾರೆ. ಪುಸ್ತಕ ಕೊಂಡು ಹಂಚಿದರೂ ಇಷ್ಟಾಗುತ್ತಿತ್ತೇ ಗೊತ್ತಿಲ್ಲ. ಇವರು ಸ್ಟಾಲ್ ಹಾಕುವುದು ಬಿಟ್ಟು ಬೇರೇನೂ ಇಲ್ಲ. ಲೈಟಿಂಗ್ ಮಾಡಿದ್ದಾರೆ. ಶಾಸಕರ ಭವನಕ್ಕೆ ಮಂಚ, ಟೇಬಲ್ ಹಾಕಿಸಿದ್ದಾರೆ. ನೇಮಕಾತಿಗೆ ಕೋರ್ಟಿನಲ್ಲಿ ತಡೆಯಾಜ್ಞೆ ವಿಧಿಸಲಾಗಿದೆ. ಇದರ ವಿಷಯದಲ್ಲಿ ಮೊಗಸಾಲೆಯ ಸುದ್ದಿಗಳೇನು? ಇದೆಲ್ಲ ಆ ಸ್ಥಾನಕ್ಕೆ ಕುಂದು ಬರುವಂತಿದೆ. ಯು.ಟಿ. ಖಾದರ್ ಅವರು ಈಗಲೂ ವಿದೇಶದಲ್ಲೇ ಇದ್ದಾರೆ. ಅವರು ಎಷ್ಟು ದೇಶಗಳಿಗೆ ಹೋಗಿದ್ದಾರೆ. ಅವರೆಷ್ಟು ಖರ್ಚು ಹಾಕಿ ಸರ್ಕಾರ ಎಷ್ಟು ಹಣ ಕೊಟ್ಟಿದೆ ಎಂದು ಕೇಳಿದರು.

ನಾನೂ ಸ್ಪೀಕರ್ ಆಗಿ ವಿದೇಶಗಳಿಗೆ ಹೋಗಿದ್ದೇನೆ. ನಮಗಿರೋ ಅವಕಾಶ ಮೀರಿ, ಎಷ್ಟು ಪ್ರವಾಸ ಮಾಡಿದ್ದಾರೆ. ಯಾರ‍್ಯಾರ ಜತೆ ಪ್ರವಾಸ ಮಾಡಿದ್ದಾರೆ? ಇವೆಲ್ಲವೂ ಬಹಿರಂಗಗೊಳ್ಳಬೇಕಿದೆ. ವಿದೇಶಗಳ ಅಧ್ಯಯನದ ಹೆಸರಿನಲ್ಲಿ ನಡೆದ ಪ್ರವಾಸದ ವಿವರ ಬಹಿರಂಗಗೊಳಿಸಿ ಎಂದು ಆಗ್ರಹಿಸಿದರು.

ಅನೇಕ ಕೆಲಸ 4 ಜಿ ವಿನಾಯಿತಿಯಲ್ಲಿ ಆಗಿದೆ. 4 G ವಿನಾಯಿತಿ ಕೊಡುವ ತುರ್ತು ಕೆಲಸ ಏನಿತ್ತು? ರಾಜ್ಯ ಸಂಕಷ್ಟದಲ್ಲಿರುವಾಗ ಸದನದಲ್ಲಿ ಇಷ್ಟೆಲ್ಲಾ ಸೌಲಭ್ಯ ಬೇಕಿತ್ತಾ ಎಂದು ಪ್ರಶ್ನಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್ ಸ್ಥಾನವನ್ನು RTI ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ