ಗರ್ಭಿಣಿ ಪತ್ನಿಯನ್ನೇ ಹತ್ಯೆ ಮಾಡಿದ ಪಾಪಿ ಗಂಡ! - Mahanayaka

ಗರ್ಭಿಣಿ ಪತ್ನಿಯನ್ನೇ ಹತ್ಯೆ ಮಾಡಿದ ಪಾಪಿ ಗಂಡ!

chamarajanagara
05/07/2025

ಚಾಮರಾಜನಗರ:   ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಡೊಳ್ಳಿಪುರದ ತೋಟದ ಮನೆಯಲ್ಲಿ ನಡೆದಿದೆ.

ಶುಭಾ(38) ಹತ್ಯೆಗೀಡಾಗಿರುವ ಮಹಿಳೆಯಾಗಿದ್ದಾರೆ. ಆಕೆಯ ಪತಿ ಮಹೇಶ್ ಹತ್ಯೆ ನಡೆಸಿದ ಆರೋಪಿಯಾಗಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮಹಿಳೆಯ ಕೊಲೆ ಕುರಿತು ಕಂಟ್ರೋಲ್ ರೂಮ್ ​​ಗೆ ಕರೆ ಬಂದಿತ್ತು. ನಂತರ ನಮ್ಮ ಠಾಣಾ ವ್ಯಾಪ್ತಿಗೆ ಬಂದಿದ್ದರಿಂದಾಗಿ ನಾವು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದೆವು. ಅಲ್ಲಿ ಶುಭಾ ಎಂಬ ಮಹಿಳೆ ಮನೆ ಮುಂದೆ ಕೊಲೆಯಾಗಿ ಬಿದ್ದಿದ್ದರು ಎಂದು ಎಸ್​ ಪಿ ಡಾ. ಬಿ. ಟಿ. ಕವಿತಾ ತಿಳಿಸಿದ್ದಾರೆ.

ಮೃತ ಮಹಿಳೆ ತನ್ನ ಗಂಡ ಮಹೇಶ್​ ಹಾಗೂ ಅತ್ತೆ ಭಾರತಿ ಜೊತೆ ತೋಟದ ಮನೆಯಲ್ಲಿ ವಾಸ ಮಾಡುತ್ತಿದ್ದರು. ಮಧ್ಯಾಹ್ನದ ನಂತರ ಬೆಂಗಳೂರಿನಿಂದ ಬಂದ ಶುಭಾ ಅವರ ಸಹೋದರಿ ಠಾಣೆಗೆ ಒಂದು ದೂರು ಅರ್ಜಿಯನ್ನು ಕೊಟ್ಟಿದ್ದರು. ಅದರಲ್ಲಿ ನಮ್ಮ ಅಕ್ಕನನ್ನು ಅವರ ಗಂಡನೇ ಕೊಲೆ ಮಾಡಿರಬಹುದು, ಅದಕ್ಕೆ ಅವರ ಅತ್ತೆಯೇ ಕುಮ್ಮಕ್ಕು ಕೊಟ್ಟಿರಬಹುದು ಎಂದು ಸಂಶಯ ವ್ಯಕ್ತಪಡಿಸಿ ದೂರನ್ನು ದಾಖಲಿಸಿದ್ದರು. ಈ ಕುರಿತು ಪೂರ್ವ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆಯನ್ನ ದಾಖಲಿಸಿಕೊಂಡು ತನಿಖೆಯನ್ನು ನಡೆಸಿದೆವು ಎಂದಿದ್ದಾರೆ.

ಶವವನ್ನು ಪರೀಕ್ಷೆ ಮಾಡಿದ ನಂತರ ಮೇಲ್ನೋಟಕ್ಕೆ ತಿಳಿದುಬಂದಿರುವುದೇನೆಂದರೆ, ಹೊರಗಿನ ವ್ಯಕ್ತಿ ಬಂದು ಕೊಲೆ ಮಾಡುವ ಸಾಧ್ಯತೆ ಇರಲಿಲ್ಲ. ಹೀಗಾಗಿ, ನಮಗೆ ಗಂಡನ ಮೇಲೆಯೇ ಅನುಮಾನ ಇತ್ತು. ಅದಕ್ಕೆ ಪೂರಕವಾಗಿ ಆತನ ಮೈಮೇಲೆ ಒಂದೆರೆಡು ಹನಿ ರಕ್ತ ಇದ್ದಿದ್ದು ಕಂಡುಬಂದಿತ್ತು. ಹೀಗಾಗಿ, ಆತ ವ್ಯವಸ್ಥಿತವಾಗಿ ಕೊಲೆಗೆ ಸಂಚು ರೂಪಿಸಿರುವುದನ್ನು ತಿಳಿದು ತನಿಖೆಯನ್ನು ಚುರುಕುಗೊಳಿಸಿದೆವು. ನಂತರ ಆತನನ್ನು ವಿಚಾರಣೆಗೊಳಪಡಿಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಹೇಳಿದ್ದಾರೆ.

ಕೊಲೆಗೆ ಬಳಸಿದ ಆಯುಧವನ್ನು ಮನೆಯಿಂದ ಸ್ವಲ್ಪ ದೂರದಲ್ಲಿ ಹೋಗಿ ಬಚ್ಚಿಟ್ಟಿದ್ದ. ಅದನ್ನು ವಶಕ್ಕೆ ಪಡೆದು ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೇವೆ ಎಂದು ತಿಳಿಸಿದ್ದಾರೆ.

ಆರೋಪಿಗೆ ಹಣಕಾಸಿನ ಅಡಚಣೆಯಿತ್ತು,  ಹೀಗಾಗಿ  ಪತ್ನಿ ಶುಭಾಗೆ ತವರು ಮನೆಯಿಂದ ಹಣ ತರುವಂತೆ ಒತ್ತಡ ಹಾಕುತ್ತಿದ್ದನು.  ಶುಭಾ 2 ತಿಂಗಳ ಗರ್ಭಿಣಿಯಾಗಿದ್ದರು. ಆದ್ರೆ ಮಗು ಬೇಡ ಎಂದು ಮಹೇಶ್ ಗಲಾಟೆ ಮಾಡಿದ್ದ. ಪತ್ನಿ ಗರ್ಭಿಣಿಯಾಗಿರುವ ಬಗ್ಗೆಯೂ ಆತನಿಗೆ ಅನುಮಾನ ಇತ್ತು. ಇದರಿಂದ ಕೊಲೆ ಮಾಡಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ. ಈ ಕೊಲೆಯಲ್ಲಿ ಅತ್ತೆಯ ಪಾತ್ರ ಕಂಡು ಬಂದಿಲ್ಲ. ಆದ್ರೆ ಸೊಸೆಯನ್ನು ಆಕೆ ನಡೆಸಿಕೊಳ್ಳುತ್ತಿದ್ದ ರೀತಿಯಲ್ಲಿ ವ್ಯತ್ಯಯವಿತ್ತು ಎಂದು ಅವರು ವಿವರಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ