ಮಕ್ಕಳ ಮುಂದೆಯೇ ಪತ್ನಿಗೆ ಬೆಂಕಿ ಹಚ್ಚಿದ ಪಾಪಿ ಪತಿ: ಪತ್ನಿಯ ಸ್ಥಿತಿ ಚಿಂತಾಜನಕ
ಕಾನ್ಪುರ: ಮಕ್ಕಳ ಮುಂದೆಯೇ ಪತಿಯೋರ್ವ ಪತ್ನಿಗೆ ಬೆಂಕಿ ಹಚ್ಚಿದ ಹತ್ಯೆಗೆ ಯತ್ತಿಸಿರುವ ಅಮಾನವೀಯ ಘಟನೆ ಕಾನ್ಪುರದ ಘಟಂಪುರ ತಹಸಿಲ್ ನ ರಾಯ್ಪುರ ಗ್ರಾಮದಲ್ಲಿ ನಡೆದಿದೆ.
ಗಾಯಗೊಂಡ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು, ಮಹಿಳೆ ಶೇ.85ರಷ್ಟು ಸುಟ್ಟ ಗಾಯಗಳೊಂದಿಗೆ ಲಕ್ನೋ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ರಾಜು ತನ್ನ ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದ ಪತ್ನಿಗೆ ಬೆಂಕಿ ಹಚ್ಚಿರುವುದು ಸ್ಥಳ ತನಿಖೆ ವೇಳೆ ಬಯಲಾಗಿದೆ.
ರಾಜು ಪ್ರಜಾಪತಿ ದಂಪತಿಗಳಿಗೆ 12 ವರ್ಷಗಳ ಹಿಂದೆ ಮದುವೆಯಾಗಿತ್ತು. ಇವರಿಗೆ 10 ವರ್ಷದ ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಘಟನೆ ನಡೆದ ದಿನ ಆರೋಪಿ ಮನೆಗೆ ಬೆಂಕಿ ಹಚ್ಚಿ ಪತ್ನಿಯನ್ನು ಸುಟ್ಟು ಹಾಕಲು ಯತ್ನಿಸಿದ್ದ.ಇದೇ ವೇಳೆ ಮಕ್ಕಳ ಕಿರುಚಾಟ ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಮಹಿಳೆಯನ್ನು ರಕ್ಷಿಸಿ ಆಸ್ವತ್ರೆಗೆ ದಾಖಲಿಸಲಾಗಿದೆ.
ತಾಯಿಗೆ ತಂದೆ ಬೆಂಕಿ ಹಚ್ಚಿದ ವೇಳೆ ತಾಯಿಯನ್ನು ರಕ್ಷಿಸುವಂತೆ ಮಕ್ಕಳು ತಂದೆಗೆ ಎಷ್ಟು ಮನವಿ ಮಾಡಿದರೂ, ತಂದೆ ಕೇಳಿಸಿಕೊಂಡಿಲ್ಲ ಎನ್ನಲಾಗಿದೆ. ಸದ್ಯ ಸಂತ್ರಸ್ತೆಯ ತಂದೆ ನೀಡಿದ ದೂರಿನನ್ವಯ ಆರೋಪಿಯ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಘಟಂಪುರ ಎಸಿಪಿ ರಂಜಿತ್ ಕುಮಾರ್ ತಿಳಿಸಿದ್ದಾರೆ.
ಪತ್ನಿಗೆ ಬೆಂಕಿ ಹಚ್ಚುತ್ತಿದ್ದ ವೇಳೆ ಆರೋಪಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಆತನನ್ನು ಬಂಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.




























