ಸಂಬಳ ಕೇಳಿದ್ದಕ್ಕೆ ಯುವಕನನ್ನು ಕಾಡಿನಲ್ಲಿ ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಪಾಪಿಗಳು!

08/02/2024
ಚಿಕ್ಕಮಗಳೂರು: ಸಂಬಳದ ಹಣ ಕೇಳಿದ್ದಕ್ಕೆ ಯುವಕನೋರ್ವನನ್ನು ಕಾಡಿನ ಮಧ್ಯೆ ಮರಕ್ಕೆ ಕಟ್ಟಿ ಹಾಕಿ ಮನಸೋಇಚ್ಛೆ ಥಳಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸೋಮಲಾಪುರ ನಿರ್ಜನ ಪ್ರದೇಶದಲ್ಲಿ ನಡೆದಿದೆ.
ಸತೀಶ್ ಹಲ್ಲೆಗೊಳಗಾದ ಹೋಟೆಲ್ ಕಾರ್ಮಿಕನಾಗಿದ್ದು, ಬೆಂಗಳೂರಿನಲ್ಲಿ ಕೊಪ್ಪ ಮೂಲದ ಮಂಜು ಎಂಬುವರ ಹೋಟೆಲ್ ನಲ್ಲಿ ಸತೀಶ್ ಕೆಲಸ ಮಾಡುತ್ತಿದ್ದ. ಸಂಬಳದ ವಿಚಾರವಾಗಿ ಗಲಾಟೆಯಿಂದ ಕೆಲಸ ಬಿಟ್ಟು ಊರಿಗೆ ಬಂದಿದ್ದ. ಹೋಟೇಲ್ ಮಾಲೀಕ ಮಂಜುಗೆ ಫೋನ್ ಮಾಡಿ ಸಂಬಳ ಕೇಳುತ್ತಿದ್ದ, ಹಣ ಕೊಡುತ್ತೇನೆ ಎಂದು ಕರೆಸಿಕೊಂಡ ಮಂಜು ಸಹೋದರ ಹಾಗೂ ಆತನ ಸ್ನೇಹಿತರು ಒಟ್ಟು 6 ಜನರ ತಂಡ ಅಮಾನವೀಯವಾಗಿ ಹಲ್ಲೆ ನಡೆಸಿದೆ.
ಕಾಡಿನ ನಡುವೆ ಮರಕ್ಕೆ ಕಟ್ಟಿ ಹಾಕಿ ರಾಡ್, ದೊಣ್ಣೆಯಿಂದ ಸತೀಶ್ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.