ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮೋಜು ಮಸ್ತಿ: ಮಹಾನಾಯಕ ವರದಿ ಬೆನ್ನಲ್ಲೇ ತನಿಖೆಗೆ ಆದೇಶ
ಚಿಕ್ಕಮಗಳೂರು: ಮೂಡಿಗೆರೆಯಲ್ಲಿ ನಡೆದ ಫೋರ್ ವ್ಹೀಲ್ ರ್ಯಾಲಿ ಬಗ್ಗೆ ಮಹಾನಾಯಕ ವರದಿ ಬೆನ್ನಲ್ಲೇ ಇದೀಗ ಎಚ್ಚೆತ್ತುಕೊಂಡ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬಿಸಿಮುಟ್ಟಿಸಿದ್ದಾರೆ.
ಈ ಬಗ್ಗೆ ಕಟ್ಟು ನಿಟ್ಟಿನ ಸೂಚನೆ ನೀಡಿರುವ ಸಚಿವ ಈಶ್ವರ್ ಖಂಡ್ರೆ, ಪಶ್ಚಿಮಘಟ್ಟ ಮತ್ತು ಅರಣ್ಯ ಮೋಜು, ಮಸ್ತಿಯ ತಾಣಗಳಲ್ಲ. ಈ ಪ್ರದೇಶದಲ್ಲಿ ನೂರಾರು ಪ್ರಭೇದದ ಖಗ, ಮೃಗ, ಕೀಟ, ಸಸ್ಯ ಸಂಕುಲ ಇರುತ್ತದೆ. ಇವುಗಳೆಲ್ಲದರ ಸಂರಕ್ಷಣೆಯ ಹೊಣೆ ಅರಣ್ಯ ಇಲಾಖೆಯ ಮೇಲಿದೆ. ಆದರೆ, ದಿ.31.08.2024ರಂದು ಮೂಡಿಗೆರೆ ತಾಲೂಕು ಬಾಳೂರು ಸಮೀಪದ ಬೈರಾಪುರ ಹೊಸಕೆರೆಯ 9 ಗುಡ್ಡಗಳ ವ್ಯಾಪ್ತಿಯಲ್ಲಿ ಅದೂ ಆನೆ ಕಾರಿಡಾ ಇರುವ ಕಾಡಿನೊಳಗೆ ಅಕ್ರಮವಾಗಿ ಪ್ರವೇಶಿಸಿ, ಫೋರ್ ವೀಲ್ ಡ್ರೈವ್ ವಾಹನಗಳ Rally ನಡೆಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ಹೇಳಿದ್ದಾರೆ.
ಈ Rallyಯಲ್ಲಿ ಸುಮಾರು 52 ವಾಹನಗಳು ಭಾಗಿಯಾಗಿದ್ದವು ಎಂಬ ಮಾಹಿತಿ ಇದ್ದು, ಈ Rallyಯಿಂದ ಪರಿಸರದ ಹಾನಿಯ ಬಗ್ಗೆ ಸಿಸಿಎಫ್ ದರ್ಜೆಯ ಅಧಿಕಾರಿಯಿಂದ ಪರಿಶೀಲನೆ ನಡೆಸಿ, ಅರಣ್ಯದೊಳಗೆ Rallyಯಲ್ಲಿ ನಡೆದಿದ್ದಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಿಸಲು ಮತ್ತು ಪರಿಸರ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಸಾರ್ವಜನಿಕರ ನೆಮ್ಮದಿ ಭಂಗ ಪ್ರಕರಣ ದಾಖಲಿಸಲು ತುರ್ತು ಕ್ರಮ ವಹಿಸುವಂತೆ ಈ ಮೂಲಕ ಸೂಚಿಸಿದೆ ಎಂದು ಅವರು ಸೂಚನೆಯಲ್ಲಿ ತಿಳಿಸಿದ್ದಾರೆ.
ಮೂಡಿಗೆರೆ ತಾಲೂಕು ಬಾಳೂರು ಸಮೀಪದ ಭೈರಾಪುರ–ಹೊಸಕೆರೆಯಲ್ಲಿ ನಡೆದ ರ್ಯಾಲಿ ನಡೆದಿತ್ತು. ಈ ಬಗ್ಗೆ ಸವಿವರವಾದ ವರದಿಯನ್ನು ಮಹಾನಾಯಕ ಪ್ರಕಟಿಸಿತ್ತು. ಸುದ್ದಿ ಪ್ರಕಟವಾದ ಬೆನ್ನಲ್ಲೇ ಇದೀಗ ಅರಣ್ಯ ಸಚಿವರೇ ಅರಣ್ಯ ಇಲಾಖೆ ವಿರುದ್ಧ ತನಿಖೆಗೆ ಸೂಚನೆ ನೀಡಿದ್ದಾರೆ. ಸಿಸಿಎಫ್ ದರ್ಜೆಯ ಅಧಿಕಾರಿಗಳ ತನಿಖೆ ನಡೆಸಿ ತಕ್ಷಣವೇ ವರದಿ ನೀಡಲು ಸೂಚಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj




























