BESCOM ವ್ಯಾಪ್ತಿಯಲ್ಲಿ ಹೊಸ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಕಡ್ಡಾಯ!: ಏನಿದು ಸ್ಮಾರ್ಟ್ ಮೀಟರ್, ಇದರ ಬೆಲೆ ಎಷ್ಟು?

ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಜುಲೈ 1ರಿಂದ ಹೊಸ ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಆದೇಶ ಜಾರಿ ಮಾಡಿದೆ.
ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಫುರ, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಹಕರು ಇನ್ನು ಮುಂದೆ ಹೊಸ ವಿದ್ಯುತ್ ಸಂಪರ್ಕಕ್ಕೆ ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಕರೆಂಟ್ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಆದೇಶದಂತೆ ಬೆಸ್ಕಾಂ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಯನ್ನ ಕಡ್ಡಾಯಗೊಳಿಸಲಾಗಿದೆ ಎಂದು ಬೆಸ್ಕಾಂ ಇಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಸ್ಕಾಂ ವ್ಯಾಪ್ತಿಗೆ ಒಳಪಡುವ ಬೆಂಗಳೂರು ನಗರ ಸೇರಿದಂತೆ ಎಲ್ಲಾ ನಗರ ಪ್ರದೇಶಗಳಲ್ಲಿ ಕಳೆದ ಫೆಬ್ರವರಿ ತಿಂಗಳ 15ರಿಂದಲೇ ಸ್ಮಾರ್ಟ್ ಮೀಟರ್ ಅಳವಡಿಕೆ ಆರಂಭವಾಗಿದೆ. ಈಗ ಬೆಸ್ಕಾಂ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಸ್ಮಾರ್ಟ್ ಮೀಟರ್ ಅಳವಡಿಸುವ ಯೋಜನೆ ವಿಸ್ತರಿಸಣೆ ಮಾಡಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ.
ಹೊಸ ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಗ್ರಾಹಕರು ಅರ್ಜಿ ಸಲ್ಲಿಸಿ, ಬೆಸ್ಕಾಂನ ನೋಂದಾಯಿತ ಮಳಿಗೆಗಳಿಂದ ಸ್ಮಾರ್ಟ್ ಮೀಟರ್ ಗಳನ್ನು ಖರೀದಿಸಿ ವಿದ್ಯುತ್ ಸಂಪರ್ಕ ಪಡೆಯಬಹುದು. ಸ್ಮಾರ್ಟ್ ಮೀಟರ್ ಅಳವಡಿಕೆ ಕುರಿತು 2024ರ ಮಾರ್ಚ್ 6 ರಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮಾರ್ಗಸೂಚಿ ಹೊರಡಿಸಿತ್ತು. ಅದರಂತೆ, ಹಂತ ಹಂತವಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಹಾಗೂ ಬದಲಾವಣೆ ಕಾರ್ಯ ಕೈಗೊಳ್ಳಲಾಗಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಹಳೆಯ ಮಾದರಿಯ ವಿದ್ಯುತ್ ಮೀಟರ್ ಗಳಿಗಿಂತ ಸ್ಮಾರ್ಟ್ ಮೀಟರ್ ಗಳು ವಿಭಿನ್ನ ಮತ್ತು ವಿಶಿಷ್ಟ. ಜಿಪಿಆರ್ ಎಸ್/ಆರ್ಎಫ್ ಆಧಾರಿತ ಸಂವಹನ ಡೇಟಾ ಸಂಗ್ರಹಣೆಗೆ ಸರ್ವರ್ ಹಾಗೂ ಕ್ಲೌಡ್ ಸಂಪರ್ಕವನ್ನು ಸ್ಮಾರ್ಟ್ ಮೀಟರ್ ಗಳು ಹೊಂದಿರುತ್ತದೆ. ಅಡ್ವಾನ್ಸ್‌ಡ್ ಮೀಟರಿಂಗ್ ಇನ್ಫ್ರಾಸ್ಟ್ರಕ್ಚರ್ (ಎಎಂಐ) ತಂತ್ರಜ್ಞಾನದ ಸ್ಮಾರ್ಟ್ ಮೀಟರ್ ಗಳು ವಿದ್ಯುತ್ ಬಳಕೆ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಗ್ರಾಹಕರು ಹಾಗೂ ಬೆಸ್ಕಾಂ ನಡುವೆ ನೇರ ಸಂಪರ್ಕ ಕಲ್ಪಿಸಲಿದೆ.
ಮೊಬೈಲ್ ಅಪ್ಲಿಕೇಶನ್ ಮೂಲಕ ನೈಜ ಸಮಯದ ವಿದ್ಯುತ್ ಬಳಕೆ, ವೊಲ್ಟೇಜ್, ಪವರ್ ಫ್ಯಾಕ್ಟರ್ ಮಾಹಿತಿ ಹಾಗೂ ರೀಚಾರ್ಜ್ ಸೌಲಭ್ಯ ಪಡೆಯಬಹುದಾಗಿದೆ. ಮುಂಚಿತವಾಗಿ ಹಣ ಪಾವತಿಸಿ ತಮ್ಮ ಆಯ್ಕೆಯ ದಿನಗಳ ಅವಧಿಗೆ ಮಾತ್ರ ರಿಚಾರ್ಜ್ ಸಹ ಮಾಡಿಸಿಕೊಳ್ಳಲು ಸ್ಮಾರ್ಟ್ ಮೀಟರ್ ಗಳಲ್ಲಿ ಅವಕಾಶವಿದೆ. ಆ ರೀತಿ ಮಾಡಿಕೊಳ್ಳಬಹುದು. ಒಂದು ವೇಳೆ ವಿದ್ಯುತ್ ಕಡಿತಗೊಂಡರೆ ಗ್ರಾಹಕರು ಬಿಲ್ ಪಾವತಿಸಿದ ತಕ್ಷಣ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬಹುದಾಗಿದೆ.
ಸ್ಮಾರ್ಟ್ ಮೀಟರ್ ಕಡ್ಡಾಯ ಅಳವಡಿಕೆ ಕುರಿತಂತೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಇನ್ನೂ ಬಾಕಿಯಿದೆ.
ಬೆಇನ್ನೂ ಸ್ಮಾರ್ಟ್ ಮೀಟರ್ ಗಳನ್ನು ಗ್ರಾಹಕರು ಬೆಸ್ಕಾಂನ ಅಧಿಕೃತ ವೆಂಡರ್ ಗಳಲ್ಲಿಯೇ ಮಾತ್ರ ಖರೀದಿ ಮಾಡಬೇಕಾಗುತ್ತದೆ. ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್ ಬೆಲೆ 5 ಸಾವಿರ ರೂಪಾಯಿಗಳಾಗಿದ್ದರೆ, ತ್ರೀ ಫೇಸ್ ಕನೆಕ್ಷನ್ಗೆ ಸ್ಮಾರ್ಟ್ ಮೀಟರ್ ದರ 8800 ರೂಪಾಯಿಗಳಾಗಿರುತ್ತವೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: