ಸೌಜನ್ಯ ಪ್ರಕರಣ: ಸ್ನೇಹಮಯಿ ಕೃಷ್ಣ ವಿರುದ್ಧ ದೂರು

ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ವಿಚಾರಣೆ ಮುಂದುವರೆದಿದೆ. ಈ ನಡುವೆ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ನೇಹಮಯಿ ಕೃಷ್ಣ ಎಂಬ ವ್ಯಕ್ತಿ ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸುವಂತೆ ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಗೆ ದೂರು ನೀಡಲಾಗಿದೆ.
ಬೆಳ್ತಂಗಡಿ ತಾಲ್ಲೂಕಿನ ಇಂದಬೆಟ್ಟು ನಿವಾಸಿ, ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ವೆಂಕಪ್ಪ ಕೋಟ್ಯಾನ್ ದೂರು ದಾಖಲಿಸಿದ್ದಾರೆ. ಮೈಸೂರಿನ ನಿವಾಸಿಯಾಗಿರುವ ಸ್ನೇಹಮಯಿಯನ್ನು ಸೌಜನ್ಯ ಕೊಲೆಗಾರರೇ ಧರ್ಮಸ್ಥಳಕ್ಕೆ ಕರೆಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಸೌಜನ್ಯ ಅವರ ಕುಟುಂಬ ಮತ್ತು ನಾವು ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ. ಸ್ನೇಹಮಯಿ ಕೃಷ್ಣ ಎಂಬ ವ್ಯಕ್ತಿ ಯಾರದ್ದೋ ಸೂಚನೆಯ ಮೇರೆಗೆ ವಿಠಲ್ ಗೌಡ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದ್ದಾನೆ, ನಮ್ಮ ಹೋರಾಟವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದ್ದಾನೆ. ಸೌಜನ್ಯ ಅವರ ಕೊಲೆಗಾರರು ದೂರು ದಾಖಲಿಸಲು ಕೃಷ್ಣ ಅವರನ್ನು ಕರೆತಂದಿರಬಹುದು ಎಂದು ನಮಗೆ ಅನುಮಾನ ಬಂದಿದೆ ಎಂದು ಉಲ್ಲೇಖಿಸಿದ್ದಾರೆ.
ಸುಳ್ಳು ದೂರು ನೀಡಿರುವ ಆರೋಪಿಯನ್ನು ಕೂಲಂಕುಷವಾಗಿ ತನಿಖೆಗೆ ಒಳಪಡಿಸಬೇಕು. ಈ ರೀತಿ ಸುಳ್ಳು ದೂರು ನೀಡಲು ಪ್ರೇರೇಪಿಸಿರುವವರನ್ನು ಪತ್ತೆಮಾಡಬೇಕು. ಹೋರಾಟಗಾರರಿಗೆ ಅವಮಾನ ಮಾಡಿರುವ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
https://chat.whatsapp.com/H1duNIQRfXnJcfQKWPzNqD