ಬಾಲಕಿಯ ಮೇಲೆ 30ಕ್ಕೂ ಅಧಿಕ ಮಂದಿಯಿಂದ ಅತ್ಯಾಚಾರ ಪ್ರಕರಣ: ಸರ್ಕಲ್ ಇನ್ಸ್ ಪೆಕ್ಟರ್ ಅಮಾನತು - Mahanayaka
11:40 PM Wednesday 22 - October 2025

ಬಾಲಕಿಯ ಮೇಲೆ 30ಕ್ಕೂ ಅಧಿಕ ಮಂದಿಯಿಂದ ಅತ್ಯಾಚಾರ ಪ್ರಕರಣ: ಸರ್ಕಲ್ ಇನ್ಸ್ ಪೆಕ್ಟರ್ ಅಮಾನತು

05/02/2021

ಚಿಕ್ಕಮಗಳೂರು: ಶೃಂಗೇರಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ 30ಕ್ಕೂ ಅಧಿಕ ಜನರು ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವಿಳಂಬದ ಹಿನ್ನೆಲೆಯಲ್ಲಿ ಶೃಂಗೇರಿ ಪೊಲೀಸ್ ವೃತ್ತ ನಿರೀಕ್ಷಕ ಬಿ.ಎಂ. ಸಿದ್ದರಾಮಯ್ಯ ಅವರನ್ನು ಅಮಾನತು ಮಾಡಲಾಗಿದೆ.

ತಾಯಿಯನ್ನು ಕಳೆದುಕೊಂಡು ಅನಾಥಳಾಗಿದ್ದ ಸಂತ್ರಸ್ತ ಬಾಲಕಿ ತನ್ನ ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆಯುತ್ತಿದ್ದಳು. ಆದರೆ, ಬಾಲಕಿಯ ಮೇಲಿನ ಅತ್ಯಾಚಾರಕ್ಕೆ ಆಕೆಯ ಚಿಕ್ಕಮ್ಮನೇ ಸಹಕಾರ ನೀಡಿದ್ದು, 15 ವರ್ಷದ ಬಾಲಕಿಯ ಮೇಲೆ 30ಕ್ಕೂ ಅಧಿಕ ಮಂದಿ ಅತ್ಯಾಚಾರ ನಡೆಸಿದ್ದಾರೆ.

ಆರೋಪಿಗಳ ಪೈಕಿ ಬಹುತೇಕರ ಹೆಸರು ಕೂಡ ಬಾಲಕಿಗೆ ಗೊತ್ತಿಲ್ಲ. ಬಾಲಕಿಯ ಹೇಳಿಕೆ ಆಧಾರಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶೃಂಗೇರಿ ಸಿಡಿಪಿಒ ಎನ್.ಜಿ.ರಾಘವೇಂದ್ರ ಅವರ ಮೂಲಕ ಜ.30ರಂದು ದೂರು ನೀಡಲಾಗಿತ್ತು. 17ಕ್ಕೂ ಅಧಿಕ ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಕಿಕ್ರೆ ಸ್ಮಾಲ್ ಅಭಿ ಮತ್ತು ಆತನ ಸ್ನೇಹಿತರಾದ ಗಿರೀಶ್ ಆನೆಗುಂದ, ಹೊಳೆಕೊಪ್ಪದ ವಿಕಾಸ್, ಮಣಿಕಂಠ, ಸಂಪತ್ ನೆಮ್ಮಾರ್, ಶೃಂಗೇರಿಯ ಅಶ್ವಥ್ ಗೌಡ, ಆನೆಗುಂದದ ರಾಜೇಶ್, ಅಮಿತ್, ಕುರುಬಗೆರೆಯ ಸಂತೋಷ್, ಹೆಗ್ಗದ್ದೆಯ ದೀಕ್ಷಿತ್, ಹೆರೂರಿನ ಸಂತೋಷ್, ನಿರಂಜನ್ ಕಿಗ್ಗ, ಶೃಂಗೇರಿಯ ನಯನಗೌಡ,  ಅಭಿಗೌಡ, ಖಾಂಡ್ಯದ ಯೋಗೀಶ್ ಸೇರಿದಂತೆ 30ಕ್ಕೂ ಅಧಿಕ ಮಂದಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದಾರೆ.

ಈ ಪ್ರಕರಣ ದೇಶಾದ್ಯಂತ ಸದ್ದು ಮಾಡಿದೆ. ಈ ಘಟನೆ ಸದನದಲ್ಲಿಯೂ ಪ್ರತಿಧ್ವನಿಸಿದ್ದು,  ವಿಪಕ್ಷ ನಾಯಕರು ಈ ಪ್ರಕರಣ ಸಂಬಂಧ ಸರ್ಕಾರವನ್ನು ತರಾಟೆಗೆತ್ತಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ ಅವರು ತನಿಖೆ ವಿಳಂಬದ ಆರೋಪದಲ್ಲಿ ಸಿಪಿಐ ಸಿದ್ದರಾಮಯ್ಯ ಅವರನ್ನು ಅಮಾನತು ಮಾಡಿದ್ದಾರೆ.

ಇತ್ತೀಚಿನ ಸುದ್ದಿ