ನಟ ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ: 31 ಮಂದಿ ಸಾವು, 20ಕ್ಕೂ ಅಧಿಕ ಮಂದಿ ಗಂಭೀರ

ತಮಿಳುನಾಡು: ನಟ ವಿಜಯ್ ಅವರ ಟಿವಿಕೆ ಪಕ್ಷದ ಸಮಾವೇಶದ ವೇಳೆ ಭಾರೀ ಕಾಲ್ತುಳಿತ ಸಂಭವಿಸಿದ್ದು, ಈವರೆಗೆ ಸುಮಾರು 31 ಜನರು ಸಾವನ್ನಪ್ಪಿರುವುದು ವರದಿಯಾಗಿದೆ. ಅಲ್ಲದೇ 20ಕ್ಕೂ ಅಧಿಕ ಜನರ ಸ್ಥಿತಿ ಗಂಭೀರವಾಗಿದೆ. ಮೃತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.
ವಿಜಯ್ ಅವರ ಜನಪ್ರಿಯತೆ ಹಿನ್ನೆಲೆಯಲ್ಲಿ ನಿರೀಕ್ಷೆಗೂ ಮೀರಿದ ಜನರು ಸೇರಿದ್ದರು. ಮೈದಾನದಲ್ಲಿ ನೂಕಾಟ, ತಳ್ಳಾಟ ಹೆಚ್ಚಾಗಿದ್ದರಿಂದ ಕೆಲವರು ನೆಲಕ್ಕುರುಳಿದ್ದು, ಕಾಲ್ತುಳಿತದ ಭೀತಿ ಉಂಟಾಯಿತು.
2026 ರ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಎಲ್ಲಾ ಪಕ್ಷಗಳು ಪ್ರಚಾರ ನಡೆಸುತ್ತಿವೆ. ತಮಿಳಗ ವೆಟ್ರಿ ಕಳಗಂ ಪಕ್ಷದ ನಾಯಕ ವಿಜಯ್ ಸೆಪ್ಟಂಬರ್ 13 ರಿಂದ ಪ್ರತಿದಿನ ಎರಡು ಜಿಲ್ಲೆಗಳಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ, ಅವರು ಶನಿವಾರ ನಮಕ್ಕಲ್ ಮತ್ತು ಕರೂರ್ ಜಿಲ್ಲೆಗಳಲ್ಲಿ ಪ್ರಚಾರದಲ್ಲಿ ಭಾಗಿಯಾಗಿದ್ದರು. ಕರೂರ್ ಜಿಲ್ಲೆಯಲ್ಲಿ ಸಂಜೆ 7 ಗಂಟೆಗೆ ನಡೆದ ಪ್ರಚಾರ ಸಭೆಯಲ್ಲಿ ಟಿವಿಕೆ ಸ್ವಯಂಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಸಭೆಯಲ್ಲಿ ವಿಜಯ್ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ, ಒಬ್ಬ ಮಹಿಳೆ ಮೂರ್ಛೆ ಹೋದರು. ಅವರಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಲಾಯಿತು. ಇದರ ನಂತರ, 30ಕ್ಕೂ ಹೆಚ್ಚು ಜನರು ಒಬ್ಬರ ನಂತರ ಒಬ್ಬರು ಮೂರ್ಛೆ ತಪ್ಪಿ ಬಿದ್ದರು. ಪೊಲೀಸರು ತಕ್ಷಣ ಪ್ರಜ್ಞಾಹೀನ ಜನರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯಲ್ಲಿ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿಯವರೆಗೆ 31 ಜನರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಪರಿಸ್ಥಿತಿಯಲ್ಲಿ, ಜನಸಂದಣಿಯ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಸ್ಟಾಲಿನ್ ಅವರು, ಅಲ್ಲಿನ ಎಲ್ಲಾ ಆಸ್ಪತ್ರೆಗಳನ್ನು ತಕ್ಷಣದ ಚಿಕಿತ್ಸೆಗೆ ಸಿದ್ಧವಾಗಿಡಲು ಆದೇಶಿಸಿದ್ದಾರೆ. ಅಲ್ಲದೆ ಸಚಿವರಾದ ಎಂ. ಸುಬ್ರಮಣಿಯನ್ ಮತ್ತು ಅನ್ಬಿಲ್ ಮಹೇಶ್ ಅವರನ್ನು ಖುದ್ದಾಗಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಆದೇಶಿಸಿದ್ದಾರೆ. ಈ ಮಧ್ಯೆ, ಮಾಜಿ ಸಚಿವ ಸೆಂಥಿಲ್ ಬಾಲಾಜಿ ಕರೂರ್ ಸರ್ಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿಯಾದರು. ಇದಲ್ಲದೆ, ಕರೂರ್ ಜಿಲ್ಲಾ ಎಸ್ಪಿ ಕೂಡ ಜನಸಂದಣಿಯನ್ನು ನಿಯಂತ್ರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD