'ಹಸಿವು' ತಾಳಲಾರದೇ ಸತ್ತ ಬೆಕ್ಕಿನ ಮಾಂಸ ತಿಂದ ಯುವಕ: ಕೇರಳದಲ್ಲಿ ಬಯಲಾಯಿತು ಕರಾಳ ಘಟನೆ - Mahanayaka
6:07 PM Wednesday 27 - August 2025

‘ಹಸಿವು’ ತಾಳಲಾರದೇ ಸತ್ತ ಬೆಕ್ಕಿನ ಮಾಂಸ ತಿಂದ ಯುವಕ: ಕೇರಳದಲ್ಲಿ ಬಯಲಾಯಿತು ಕರಾಳ ಘಟನೆ

04/02/2024


Provided by

‘ಹಸಿವು’ ಎಂಬುದು ಅನುಭವಿಸಿದವರಿಗೆ ಮಾತ್ರ ಗೊತ್ತು. ಭಾಷಣ ಮಾಡಿದವರಿಗೆ ಅದರ ಕರಾಳತೆ ಗೊತ್ತಿರಲ್ಲ. ನಮ್ಮ ಸುತ್ತಮುತ್ತ ಹಸಿವಿನಿಂದ ಬಳಲುತ್ತಿರುವ ಮನುಷ್ಯರು ಈಗಲೂ ಇದ್ದಾರೆ. ಅದು ನೋಡಿದವರಿಗೆ ಮಾತ್ರ ಗೊತ್ತು. ಹೌದು. ಹಸಿವಿನಿಂದ ಬಳಲುತ್ತಿದ್ದ ಯುವಕನೊಬ್ಬ ಸತ್ತ ಬೆಕ್ಕನ್ನು ತಿಂದಿರುವ ಆಘಾತಕಾರಿ ಘಟನೆ ಕೇರಳದ ಕುಟ್ಟಿಪುರಂ ನಲ್ಲಿ ನಡೆದಿದೆ.

ಕುಟ್ಟಿಪುರಂನಲ್ಲಿ ಯುವಕನೊಬ್ಬ ಸತ್ತು ಬಿದ್ದಿದ್ದ ಬೆಕ್ಕಿನ ಹಸಿ ಮಾಂಸವನ್ನು ತಿನ್ನುತ್ತಿದ್ದ. ಇದನ್ನು ನೋಡಿದ ಅಕ್ಕಪಕ್ಕದವರು ಆತನನ್ನು ಪ್ರಶ್ನಿಸಿದ್ದು, ಕಳೆದ ಐದು ದಿನಗಳಿಂದ ಏನು ತಿಂದಿಲ್ಲ. ಹಸಿವು ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದ್ದಾನೆ.

ಒಳ್ಳೆಯ ಬಟ್ಟೆ ತೊಟ್ಟಿದ್ದ ಯುವಕ ಅಸ್ಸಾಂ ಮೂಲದವನಾಗಿದ್ದು ಬಸ್ ನಿಲ್ದಾಣದ ಸಮೀಪ ಬೆಕ್ಕಿನ ಹಸಿ ಮಾಂಸವನ್ನು ತಿನ್ನುತ್ತಿದ್ದ. ಇದನ್ನು ನೋಡಿ ಸ್ಥಳೀಯರು ಅದು ಸತ್ತಿದೆ, ವಾಸನೆ ಬರುತ್ತಿದೆ ಅದನ್ನು ತಿನ್ನಬೇಡಿ ಎಂದು ಹೇಳಿದ್ದಾರೆ. ಆದರೆ ಯುವಕ ತಿನ್ನುವುದನ್ನು ಮುಂದುವರಿಸಿದ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಆತನಿಗೆ ಹಣ್ಣು, ಒಂದಷ್ಟು ತಿನಿಸುಗಳನ್ನು ಕೊಟ್ಟರು. ಅದನ್ನು ಸ್ವೀಕರಿಸಿ ಆತ ಸೇವಿಸಿದ. ಸತ್ತ ಬೆಕ್ಕನ್ನು ಏಕೆ ತಿಂದೆ ಎಂದು ಕೇಳಿದ್ದಕ್ಕೆ ಐದು ದಿನಗಳಿಂದ ಏನೂ ತಿಂದಿಲ್ಲ ಎಂದಷ್ಟೇ ಹೇಳಿದ್ದಾನೆ. ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಆತ ಅಲೆದಾಡುತ್ತಿದ್ದ ಎಂದು ಪೊಲೀಸರಿಗೆ ಸ್ಥಳೀಯರು ತಿಳಿಸಿದ್ದಾರೆ.

ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಲು ಸಿದ್ಧತೆ ನಡೆಸುತ್ತಿದ್ದಂತೆ ಆತ ಯಾರಿಗೂ ಹೇಳದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಆತನನ್ನು ಪತ್ತೆ ಹಚ್ಚಿ ಪ್ರಾಥಮಿಕ ಚಿಕಿತ್ಸೆಗಾಗಿ ತಿಸ್ಸೂರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನಿಗೆ ಯಾವುದೇ ಮಾನಸಿಕ ಕಾಯಿಲೆ ಇಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ.

ವಿಚಾರಣೆ ವೇಳೆ ಆತ ತಾನು ಕಾಲೇಜು ವಿದ್ಯಾರ್ಥಿ. ಅಸ್ಸಾಂನಿಂದ ಮನೆಯಲ್ಲಿ ಯಾರಿಗೂ ಹೇಳದೇ ಬಂದಿರುವುದಾಗಿ ಹೇಳಿದ್ದಾನೆ. ಚೆನ್ನೈನಲ್ಲಿ ಕೆಲಸ ಮಾಡುತ್ತಿರುವ ಆತನ ಸಹೋದರನಿಗೆ ಕರೆ ಮಾಡಲಾಗಿದೆ. ಅವರು ಬಂದ ಬಳಿಕ ಆತನನ್ನು ಅವರ ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ