2ನೇ ಮದುವೆಯಾದ ತಂದೆ: ಮಲ ತಾಯಿಯಾಗಿ ಬಂದವಳು 6 ವರ್ಷದ ಮಗಳನ್ನ ಕೊಂದೇ ಬಿಟ್ಟಳು!

ಬೀದರ್: 6 ವರ್ಷದ ಬಾಲಕಿಯನ್ನು ಮಲ ತಾಯಿಯೊಬ್ಬಳು ತಾನು ವಾಸಿಸುತ್ತಿದ್ದ ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆ ತಳ್ಳಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆಗಸ್ಟ್ 27 ರಂದು ನಗರದ ಆದರ್ಶ ಕಾಲೋನಿಯಲ್ಲಿ ಈ ಘಟನೆ ನಡೆದಿತ್ತು. 20 ವರ್ಷದ ಮಲತಾಯಿ ರಾಧಾ, 6 ವರ್ಷದ ಬಾಲಕಿ ಶಾನ್ವಿ ಕಟ್ಟಡದಿಂದ ಜಾರಿ ಬಿದ್ದು ಸಾವನ್ನಪ್ಪಿರುವುದಾಗಿ ಹೇಳಿದ್ದಳು. ಇದನ್ನು ನಂಬಿದ್ದ ಬಾಲಕಿಯ ತಂದೆ ಸಿದ್ಧಾಂತ್ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ತನ್ನ ಮಗಳು ಕಟ್ಟಡದ ಮೂರನೇ ಮಹಡಿಯಿಂದ ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಆಗಸ್ಟ್ 28ರಂದು ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.
ಆದರೆ, ಶನಿವಾರ ನೆರೆಹೊರೆಯವರು ತಮ್ಮ ಸಿಸಿ ಟಿವಿ ಕ್ಯಾಮರಾವನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆ ಘಟನೆ ನಡೆದ ದಿನ ರಾಧಾ ಟೆರೇಸ್ ಮೇಲೆ ಬಾಲಕಿಯನ್ನು ಕರೆದೊಯ್ಯುತ್ತಿರುವ ದೃಶ್ಯ ಸೆರೆಯಾಗಿತ್ತು. ಹೀಗಾಗಿ ರಾಧಾ ಉದ್ದೇಶ ಪೂರ್ವಕವಾಗಿ ತನ್ನ ಮಲ ಮಗಳನ್ನು ಟೆರೆಸ್ ನಿಂದ ಕೆಳಗೆ ತಳ್ಳಿ ಕೊಲೆ ಮಾಡಿರುವುದು ಬಯಲಾಗಿತ್ತು.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಮತ್ತು ವಿವರವಾದ ತನಿಖೆಯ ನಂತರ, ಮೃತಳ ಅಜ್ಜಿಯ ದೂರಿನ ಮೇರೆಗೆ ಆರೋಪಿ ಮಹಿಳೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಮತ್ತು ಈ ಸಂಬಂಧ ಆಕೆಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತ ಬಾಲಕಿಯ ತಾಯಿ 2019 ರಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು. ನಂತರ ಕೆಲವು ವರ್ಷಗಳ ನಂತರ ಸಿದ್ಧಾಂತ್ ರಾಧಾಳನ್ನು ವಿವಾಹವಾದರು ಎಂದು ಪೊಲೀಸರು ಹೇಳಿದ್ದಾರೆ.
ಸಿದ್ಧಾಂತ್ ಮತ್ತು ರಾಧಾಗೆ ಅವಳಿ ಮಕ್ಕಳಿದ್ದಾರೆ. ಆದರೆ ವಿಚಾರಣೆಯ ಸಮಯದಲ್ಲಿ, ಆಸ್ತಿಯನ್ನು ತನ್ನ ಸ್ವಂತ ಮಕ್ಕಳಿಗೆ ಮಾತ್ರ ಹಂಚಬೇಕೆಂದು ಬಯಸಿದ್ದರಿಂದ ತನ್ನ ಮಲಮಗಳನ್ನು ಕೊಂದಿದ್ದೇನೆ ಎಂದು ಮಹಿಳೆ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD