ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ತನ್ನ ಹೇಳಿಕೆಯನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ: ಯು.ಟಿ.ಖಾದರ್ - Mahanayaka
7:11 PM Thursday 18 - September 2025

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ತನ್ನ ಹೇಳಿಕೆಯನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ: ಯು.ಟಿ.ಖಾದರ್

u t khadar
04/05/2025

ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ದೇಶಪೂರ್ವಕವಾಗಿ ತನ್ನ ಹೇಳಿಕೆಯನ್ನು ತಪ್ಪಾಗಿ ವ್ಯಾಖ್ಯಾನಿಸಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.


Provided by

ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವು, ಕೊಲೆಯ ಹಿಂದೆ ಮತೀಯ ಕಾರಣವಿದೆಯೆಂಬ ವದಂತಿಗಳಿಂದ, ಸ್ಥಳೀಯ ಮಟ್ಟದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನುಂಟು ಮಾಡಿತ್ತು. ಆಗ ನಾನು ಮಾಧ್ಯಮದ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ, ಈ ಘಟನೆ ರೌಡಿಗಳ ನಡುವಿನ ಗ್ಯಾಂಗ್ ವಾರ್ ಆಗಿರಬಹುದೆಂಬ ಶಂಕೆಯನ್ನು ವ್ಯಕ್ತಪಡಿಸಿದ್ದೆ. ಆರೋಪಿಗಳ ಬಂಧನದ ನಂತರವೇ ಸಂಪೂರ್ಣ ಸತ್ಯಾಸತ್ಯತೆ ಬೆಳಕಿಗೆ ಬರುತ್ತದೆ ಎಂದಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

ಘಟನೆ ನಡೆದ ತಕ್ಷಣವೇ ಇದು ಫಾಝಿಲ್ ಹತ್ಯೆಗೆ ಪ್ರತಿಕಾರ ಎಂಬ ಸುದ್ದಿ ಹಬ್ಬಿತ್ತು. ಈ ವೇಳೆ ಫಾಝಿಲ್ ತಂದೆ ಮತ್ತು ಸಹೋದರರು ನನಗೆ ಕರೆ ಮಾಡಿ, ಈ ಘಟನೆಯಲ್ಲಿ ನಮ್ಮ ಪಾತ್ರವಿಲ್ಲ ಎಂದು ಹೇಳಿದ್ದರು. ಅದನ್ನು ನಾನು ಮಾಧ್ಯಮ ಹೇಳಿಕೆಯಲ್ಲಿ ಉಲ್ಲೇಖ ಮಾಡಿದ್ದೇನೆಯೇ ಹೊರತು, ಈ ಕೃತ್ಯದಲ್ಲಿ ಅವರ ಪಾತ್ರವಿಲ್ಲ ಎಂದು ಎಲ್ಲಿಯೂ ಹೇಳಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಹಂತಕರ ಬಂಧನಕ್ಕೆ ಪ್ರಯತ್ನಿಸುತ್ತಿದ್ದು, ಬಂಧನದ ನಂತರ, ವಿಚಾರಣೆಯ ಮೂಲಕ ಈ ಕೃತ್ಯದಲ್ಲಿ ಯಾರೆಲ್ಲಾ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶಾಮೀಲಾಗಿದ್ದಾರೆ ಎಂದು ತಿಳಿದು ಬರಲಿದೆ ಹಾಗೂ ಅಪರಾಧಿಗಳಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ನೀಡಲಾಗುವುದು ಎಂಬುದನ್ನೂ ಸ್ಪಷ್ಟಪಡಿಸಿದ್ದೆ ಎಂದು ಖಾದರ್ ಹೇಳಿದ್ದಾರೆ.

ಆರೋಪಿಗಳ ಬಂಧನಕ್ಕೆ ಮುಂಚೆಯೇ ಪ್ರಕರಣವನ್ನು ಕೋಮು ದೃಷ್ಟಿಯಲ್ಲಿ ಚಿತ್ರೀಕರಿಸಿ, ಸಮಾಜದಲ್ಲಿ ಅಶಾಂತಿ ಉಂಟು ಮಾಡಿ ಎರಡು ಧರ್ಮಗಳ ನಡುವೆ ಗಲಭೆ ಎಬ್ಬಿಸಿ, ರಾಜಕೀಯ ಲಾಭ ಪಡೆಯಲು ಸ್ಥಳೀಯ ನಾಯಕರು ಪ್ರಯತ್ನಿಸುತ್ತಿದ್ದರು. ಅಂತಹ ಸಮಯದಲ್ಲಿ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಲು ನಾನು ಪ್ರಯತ್ನಿಸಿದ್ದೇನೆಯೇ ಹೊರತು, ಯಾರ ಪರವಾಗಿಯೂ ಆಗಲಿ, ಯಾರ ವಿರೋಧವಾಗಿಯೂ ಆಗಲಿ ಮಾತನಾಡುವ ಉದ್ದೇಶ ನನ್ನದಾಗಿರಲಿಲ್ಲ ಎಂದು ಖಾದರ್ ಸ್ಪಷ್ಟನೆ ನೀಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

 

ಇತ್ತೀಚಿನ ಸುದ್ದಿ