ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಮತ್ತೆ ಮೂವರು ಆರೋಪಿಗಳು ಅರೆಸ್ಟ್

ಮಂಗಳೂರು: ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಳವಾರು ಗ್ರಾಮದ ಅಝರುದ್ದೀನ್ ಅಲಿಯಾಸ್ ಅಝರ್ ಯಾನೆ ಅಜ್ಜು (29), ಉಡುಪಿ ಜಿಲ್ಲೆಯ ಬೆಳಪು ಗ್ರಾಮದ ಪ್ರಸಕ್ತ ಬಜ್ಜೆಯಲ್ಲಿ ವಾಸವಾಗಿರುವ ಅಬ್ದುಲ್ ಖಾದರ್ ಅಲಿಯಾಸ್ ನೌಫಲ್ (24), ಫರಂಗಿಪೇಟೆ ಕುಂಪನಮಜಲಿನ ಪ್ರಸಕ್ತ ಹಾಸನ ಜಿಲ್ಲೆ ಕೆ.ಆರ್.ಪುರಂ ನಿವಾಸಿ ನೌಷಾದ್ ಅಲಿಯಾಸ್ ವಾಮಂಜೂರು ನೌಷಾದ್ (39) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಅಝರುದ್ದೀನ್ ವಿರುದ್ಧ ಪಣಂಬೂರು, ಸುರತ್ಕಲ್, ಮುಲ್ಕಿ ಪೊಲೀಸ್ ರಾಣೆಗಳಲ್ಲಿ 3 ಕಳವು ಪ್ರಕರಣ ದಾಖಲಾಗಿದೆ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಈತ ಸುಹಾಸ್ ಶೆಟ್ಟಿಯ ಚಲನವಲನಗಳ ಮಾಹಿತಿ ನೀಡಿ ಕೊಲೆಗೆ ಸಹಕಾರ ನೀಡಿದ ಆರೋಪವಿದೆ.
ಅಬ್ದುಲ್ ಖಾದರ್ ಆರೋಪಿಗಳಿಗೆ ಕಾರಿನಲ್ಲಿ ಪರಾರಿಯಾಗಲು ಸಹಕರಿಸಿದ ಆರೋಪಿಯಾಗಿದ್ದಾನೆ. ನೌಷಾದ್ ಆರೋಪಿಗಳ ಜೊತೆ ಕೊಲೆಗೆ ಸಂಚು ರೂಪಿಸಿದ್ದ. ಈತನ ವಿರುದ್ಧ ಸುರತ್ಕಲ್, ಬಜ್ಜೆ ಮೂಡುಬಿದಿರೆ, ಮಂಗಳೂರು ಉತ್ತರ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ ದರೋಡೆಗೆ ಸಂಚು ಸೇರಿದಂತೆ 6 ಪ್ರಕರಣಗಳಿವೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಆರೋಪಿಗಳ ಪೈಕಿ ಅಝರುದ್ದೀನ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನಿಬ್ಬರನ್ನು ಹೆಚ್ಚಿನ ವಿಚಾರಣೆ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: