ಎರಡು ಕಾರಣಗಳಿಗಾಗಿ ನಡೆಯಿತು ಸುಹಾಸ್ ಶೆಟ್ಟಿಯ ಭೀಕರ ಹತ್ಯೆ!: ಆರೋಪಿಗಳ ಪೈಕಿ ಒಬ್ಬ ಫಾಝಿಲ್ ಸಹೋದರ! - Mahanayaka
7:08 PM Wednesday 17 - September 2025

ಎರಡು ಕಾರಣಗಳಿಗಾಗಿ ನಡೆಯಿತು ಸುಹಾಸ್ ಶೆಟ್ಟಿಯ ಭೀಕರ ಹತ್ಯೆ!: ಆರೋಪಿಗಳ ಪೈಕಿ ಒಬ್ಬ ಫಾಝಿಲ್ ಸಹೋದರ!

suhas shetty
03/05/2025

ಮಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ರೌಡಿಶೀಟರ್ ಸುಹಾಸ್ ಶೆಟ್ಟಿಯ ಭೀಕರ ಹತ್ಯೆ ಪ್ರಕರಣದ ಬಗ್ಗೆ ಇದೀಗ ಸಂಪೂರ್ಣ ಚಿತ್ರಣ ದೊರಕಿದೆ.  ಸುಹಾಸ್ ಶೆಟ್ಟಿಯ ಹತ್ಯೆಯ ಹಿಂದೆ ಎರಡು ಕಾರಣಗಳಿತ್ತು. ಹೀಗಾಗಿ ಎರಡು ಬಾರಿ ಆರೋಪಿಗಳು ಕೊಲೆ ಯತ್ನ ನಡೆಸಿದ್ದರು. ಆದರೆ ಮೂರನೇ ಬಾರಿಗೆ ನಡೆಸಿದ ಪ್ರಯತ್ನ ಯಶಸ್ವಿಯಾಗಿತ್ತು.


Provided by

* ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ 8 ಆರೋಪಿಗಳನ್ನು ನಿನ್ನೆ ರಾತ್ರಿ  ಪೊಲೀಸರು ಬಂಧಿಸಿದ್ದಾರೆ. ಬಂಧಿತರ ವಿವರ ಹೀಗಿದೆ:

*  ಶಾಂತಿಗುಡ್ಡೆ ಪೇಜಾವರ ಗ್ರಾಮದ ನಿವಾಸಿ ಅಬ್ದುಲ್ ನಾಸಿರ್ ಅವರ ಪುತ್ರ ಅಬ್ದುಲ್ ಸಫ್ಘಾನ್ (29). ಈತ ಚಾಲಕನಾಗಿ ದುಡಿಯುತ್ತಿದ್ದ.

* ಬಜ್ಜೆ ನಿವಾಸಿ ಅಬೂಬಕ್ಕರ್ ಅವರ ಪುತ್ರ ನಿಯಾಝ್ (28). ಈತ ಮೇಸ್ತ್ರಿ ಹೆಲ್ಪರ್ ಕೆಲಸ ಮಾಡುತ್ತಿದ್ದ.

* ಕೆಂಜಾರು ನಿವಾಸಿ ಅಬ್ದುಲ್ ರಝಾಕ್ ಅವರ ಪುತ್ರ ಮುಹಮ್ಮದ್ ಮುಝಮ್ಮಿಲ್ (32). ಸೌದಿ ಅರೇಬಿಯಾ ದಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಈತ ಕಳೆದ ನಾಲ್ಕು ತಿಂಗಳ ಹಿಂದೆ ಊರಿಗೆ ಮರಳಿದ್ದಾನೆ.

* ಕಳವಾರು ನಿವಾಸಿ ಮುಹಮ್ಮದ್ ಅವರ ಪುತ್ರ ಕಲಂದರ್ ಶಾಫಿ (31). ಈತ ಬೆಂಗಳೂರಿನಲ್ಲಿ ಸೇಲ್ಸ್ ಮ್ಯಾನ್ ಆಗಿ ದುಡಿಯುತ್ತಿದ್ದ.

* ಚಿಕ್ಕಮಗಳೂರಿನ ಕಳಸ ನಿವಾಸಿ ರಾಜೇಶ್ ಅವರ ಪುತ್ರ ರಂಜಿತ್ (19). ಈತ ಚಾಲಕನಾಗಿ ದುಡಿಯುತ್ತಿದ್ದ.

* ಚಿಕ್ಕಮಗಳೂರಿನ ಕಳಸ ನಿವಾಸಿ ಮಾರಿ ಮುತ್ತು ಅವರ ಪುತ್ರ ನಾಗರಾಜ್ (20). ಈತ ಶಾಮಿಯಾನ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ.

* ಜೋಕಟ್ಟೆ ನಿವಾಸಿ ಅಬ್ದುಲ್ ಮಜೀದ್ ಅವರ ಪುತ್ರ ಮುಹಮ್ಮದ್ ರಿಝಾನ್ (28). ಈತ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ.

* ಉಮರುಲ್ ಫಾರೂಕ್ ಅವರ ಪುತ್ರ ಆದಿಲ್ ಮೆಹರೂಫ್. ಈತ 2022 ರಲ್ಲಿ ಕೊಲೆಯಾದ ಫಾಝಿಲ್ ಅವರ ಸಹೋದರ.

ಕೊಲೆಗೆ  ಎರಡು ಕಾರಣ:

ಆರೋಪಿ ಅಬ್ದುಲ್ ಸಫ್ವಾನ್ ಮೇಲೆ 2023ರಲ್ಲಿ  ಸುಹಾಸ್ ಶೆಟ್ಟಿಯ ಸಹಚರರಾದ ಧನ್ ರಾಜ್, ಪುನೀತ್, ಪ್ರಶಾಂತ್ ಮಾರಣಾಂತಕವಾಗಿ ಹಲ್ಲೆ ನಡೆಸಿದ್ದರು.  ಈ ವಿಚಾರದಲ್ಲಿ ಸುಹಾಸ್ ಶೆಟ್ಟಿಯ ಬಗ್ಗೆ ಅಬ್ದುಲ್ ಸಫ್ವಾನ್ ಭಯವಿತ್ತು. ಸುಹಾಸ್ ಶೆಟ್ಟಿ ತನ್ನನ್ನು ಮುಗಿಸುತ್ತಾನೆ ಎಂದು ಸಫ್ವಾನ್ ಗೆ ಭಯವಿತ್ತು. ಹೀಗಾಗಿ ಆತ ಈ ವಿಚಾರವನ್ನು ಮೊಹಮ್ಮದ್ ಮುಝಮಿಲ್ ಜೊತೆಗೆ ಚರ್ಚೆ ಮಾಡುತ್ತಾನೆ. ಬಳಿಕ ನಿಯಾಝ್ ಜೊತೆಗೂ ಈ ವಿಚಾರ ಚರ್ಚೆ ಮಾಡುತ್ತಾರೆ. ಈ ಇಬ್ಬರು ಕೂಡ ಸ್ಥಳೀಯರಾಗಿರುತ್ತಾರೆ.

ಬಳಿಕ ಈ ಮೂವರು ಸೇರಿಕೊಂಡು ಆದಿಲ್ ಮೆಹರೂಫ್ ನನ್ನು ಭೇಟಿ ಮಾಡುತ್ತಾರೆ. ಆದಿಲ್ ಮೆಹರೂಫ್ 2022ನಲ್ಲಿ  ಸುಹಾಸ್ ಶೆಟ್ಟಿ ಮತ್ತು ಗ್ಯಾಂಗ್ ನಿಂದ ಹತ್ಯೆಗೀಡಾದ ಫಾಝಿಲ್ ನ ಸಹೋದರನಾಗಿದ್ದಾನೆ. ಫಾಝಿಲ್ ಹತ್ಯೆ ಕೇಸ್ ನಲ್ಲಿ ಸುಹಾಸ್ ಶೆಟ್ಟಿ ಒಂದು ವರ್ಷ ಜೈಲಿನಲ್ಲಿದ್ದು, ಬಳಿಕ ಬಿಡುಗಡೆಯಾಗಿದ್ದ. ಹೀಗಾಗಿ ಆದಿಲ್ ಮೆಹರೂಫ್ ನೊಳಗಿನ ಆಕ್ರೋಶವನ್ನು ಅಬ್ದುಲ್ ಸಫ್ವಾನ್ ಬಳಸಿಕೊಂಡಿದ್ದಾನೆ.

ಅಂತಿಮವಾಗಿ ಸುಹಾಸ್ ಶೆಟ್ಟಿಯ ಹತ್ಯೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. 5 ಲಕ್ಷ ರೂಪಾಯಿಯಲ್ಲಿ ಕೊಲೆ ನಡೆಸಲು ಮಾತುಕತೆ ನಡೆಯುತ್ತವೆ.  3 ಲಕ್ಷ ರೂಪಾಯಿಗಳನ್ನು ಆದಿಲ್ ಅಡ್ವಾನ್ಸ್  ಆಗಿ ಕೊಡುತ್ತಾನೆ. ನಂತರ ಇವರು ಟೀಂ ರೆಡಿ ಮಾಡುತ್ತಾರೆ.

ಟೀಂನಲ್ಲಿ ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ಮೊಹಮ್ಮದ್ ರಿಝ್ವಾನ್ ಮತ್ತು ಆದಿಲ್ ಮೆಹರೂಫ್ ಹಾಗೂ ನಿಯಾಝ್ ನ ಇಬ್ಬರು ಸ್ನೇಹಿತರಾದ ಕಲಸ ಚಿಕ್ಕಮಗಳೂರಿನ ರಂಜಿತ್, ನಾಗರಾಜ್, ಅವರನ್ನೂ ಕರೆಯುತ್ತಾರೆ.  15 ದಿನಗಳ ಹಿಂದೆ ನಾಗರಾಜ್ ಮತ್ತು ರಂಜಿತ್  ಸಫ್ವಾನ್ ಮನೆಯಲ್ಲಿ ವಾಸ ಮಾಡಿದ್ದಾರೆ. 2 ಬಾರಿ ಕೊಲೆ ಮಾಡಲು ಯತ್ನಿಸಿ ವಿಫಲರಾಗಿದ್ದರು.  ಮೊನ್ನೆ ಇವರ ಚಲನವಲನ ಸಫ್ವಾನ್ ಟೀಂಗೆ ಗೊತ್ತಾಗಿದೆ. ಅಂದು ತನ್ನ ಸ್ನೇಹಿತರೊಂದಿಗೆ ತೆರಳುತ್ತಿದ್ದ ಸುಹಾಸ್ ಶೆಟ್ಟಿಯನ್ನು ಗಮನಿಸಿ ಫಾಲೋ ಮಾಡಿ ಅಪಘಾತ ನಡೆಸಿ, ಬಳಿಕ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ನಡೆಸಿದ್ದಾರೆ.

ಇನ್ನೂ ಆರೋಪಿಗಳು ತಪ್ಪಿಸಿಕೊಳ್ಳುವ ವೇಳೆ ಇಬ್ಬರು ಬುರ್ಖಾಧಾರಿ ಮಹಿಳೆಯರು  ಆರೋಪಿಗಳ ಜೊತೆಗೆ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ಮಹಿಳೆಯರು ಆರೋಪಿ ನಿಯಾಝ್ ನ ಸಂಬಂಧಿಕರು ಎಂದು ಹೇಳಲಾಗಿದೆ. ಇವರನ್ನೂ ವಿಚಾರಣೆಗೆ ಕರೆಯುವುದಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ