ಏಪ್ರಿಲ್ 3ರಂದು ಮಂಡ್ಯದಲ್ಲಿ ತನ್ನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ ಎಂದ ಸುಮಲತಾ!

ಬೆಂಗಳೂರು: ಮಂಡ್ಯದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಮಂಡ್ಯದ ಹಾಲಿ ಸಂಸದೆ ಸುಮಲತಾ ಬೆಂಬಲಿಗರ ಸಭೆ ನಡೆಸಿದ್ದು, ಈ ಲೋಕ ಸಭೆಯಲ್ಲಿ ತನ್ನ ನಿರ್ಧಾರ ಏನು ಎನ್ನುವುದನ್ನು ಮಂಡ್ಯದಲ್ಲಿ 3ನೇ ತಾರೀಖಿನಂದು ತಿಳಿಸುವುದಾಗಿ ಅವರು ಹೇಳಿದರು.
ಜೆ.ಪಿ.ನಗರದ ಸುಮಲತಾ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದ ಹಾಲಿ ಸಂಸದೆ ಸುಮಲತಾ, ಮೊದಲು ಬೆಂಬಲಿಗರ ಅಭಿಪ್ರಾಯಗಳನ್ನು ಕೇಳಿದರು. ಹಲವು ಬೆಂಬಲಿಗರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಕೆಲವರು ಸುಮಲತಾ ಪಕ್ಷೇತರರಾಗಿ ಸ್ಪರ್ಧಿಸಬೇಕು ಎಂದು ಒತ್ತಾಯ ಮಾಡಿದರು.
ಬಳಿಕ ಮಾತನಾಡಿದ ಸುಮಲತಾ, ನನ್ನ ರಾಜಕೀಯ ಜೀವನ ಆರಂಭವಾಗಿರೋದು ನಿಮ್ಮ ಪ್ರೀತಿಯಿಂದ ನಾನು ಏನೇ ನಿರ್ಧಾರ ಕೈಗೊಂಡರೂ, ನಿಮ್ಮನ್ನು ನೋಯಿಸುವಂತಹ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಹೇಳಿದರು.
ಭಾಷಣದ ವೇಳೆ ಮಂಡ್ಯದ ಜನತೆಗೆ ಭಾವುಕರಾಗಿ ಕೃತಜ್ಞತೆ ಸಲ್ಲಿಸಿದ ಸುಮಲತಾ, ಅಭಿಮಾನಿಗಳು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ, ನೀವು ಬಂದಿರೋದೇ ನನಗೆ ಆಶೀರ್ವಾದ, ಮಂಡ್ಯ ಜನ ಯಾವುದನ್ನೂ ಲೆಕ್ಕಿಸಿಲ್ಲ, ಅದು ಅಂಬರೀಷ್ ಅವರ ಮೇಲಿನ ಪ್ರೀತಿ ಎಂದು ಹೇಳಿದರು.
ನಾನು ಚುನಾವಣೆಗೆ ಸ್ಪರ್ಧಿಸಿದ ದಿನದಿಂದ ಇಂದಿನವರೆಗೂ ನುಡಿದಂತೆ ನಡೆದಿದ್ದೇನೆ. ಮಂಡ್ಯ ಜಿಲ್ಲೆಯ ಘನತೆಯನ್ನು ಪಾರ್ಲಿಮೆಂಟ್ ನಲ್ಲಿ ಎತ್ತಿ ಹಿಡಿದಿದ್ದೇನೆ. ನಾನು ಇದ್ರು, ಗೆದ್ರೂ, ಸೋತ್ರು ಮಂಡ್ಯದಲ್ಲೇ, ಮಂಡ್ಯ ಬಿಟ್ಟು ನಾನು ಎಲ್ಲೂ ಹೋಗಲ್ಲ ಅಂತ ಹೇಳಿದ್ದೇನೆ. ಯಾಕೆಂದ್ರೆ ಇದು ರಾಜಕೀಯ ಸಂಬಂಧವಲ್ಲ, ಅದೊಂದು ಭಾವನೆ ಎಂದರು.
ನನ್ನ ಮುಂದಿನ ರಾಜಕೀಯ ನಿರ್ಧಾರ ಏನು ಎನ್ನುವುದನ್ನು ಮುಂದಿನ ಮೂರನೇ ತಾರೀಖಿನಂದು ಮಂಡ್ಯದಲ್ಲಿ ತಿಳಿಸುತ್ತೇನೆ ಎಂದು ಇದೇ ವೇಳೆ ಸುಮಲತಾ ತಿಳಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth